ಸಮಗ್ರ ನ್ಯೂಸ್: ಸ್ನೇಹಿತರ ಜೊತೆ ಸೇರಿ ಸ್ವಂತ ಮಗ ತಂದೆಯನ್ನೇ ಕೊಲೆಗೈದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಇಲ್ಲಿನ ಕೊಳ್ಳೂರ(ಎಂ) ಸೀಮಾಂತರದ ದೇವದುರ್ಗಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಾನಪ್ಪ ಗೋಪಾಳಪುರ ಎಂಬುವರ ಬೈಕ್ ತಡೆದು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಸಲಿಂಗಪ್ಪ(27) ಮತ್ತು ಸ್ನೇಹಿತ ಸುರೇಶ್ (23) ಮಾದೇಶ್ (20) ಬಂಧಿತ ಆರೋಪಿಗಳು.
ಮೇ 12 ರಂದು ನಡೆದಿದ್ದ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರ ತಂಡ ಮಂಗಳವಾರ ಮೂವರು ಕೊಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏನಿದು ಘಟನೆ: ಮೇ 12 ರಂದು ಉಪನ್ಯಾಸಕ ಮಾನಪ್ಪ ಅವರು ಎರಡನೇ ಪತ್ನಿ ತವರೂರಾದ ಹಯ್ಯಾಳ(ಬಿ) ಗ್ರಾಮಕ್ಕೆ ತೆರಳುತ್ತಿರುವಾಗ ಮೊದಲನೆಯ ಪತ್ನಿ ಮಗ ಬಸಲಿಂಗಪ್ಪ ಮತ್ತು ಈತನ ಇನ್ನಿಬ್ಬರು ಸ್ನೇಹಿತರು ಸೇರಿ ಕೊಲೆ ಮಾಡಿದ್ದರು. ಮೊದಲ ಪತ್ನಿಗೆ ಮೂವರು ಮಕ್ಕಳಿದ್ದು, ಅವರನ್ನು ಉಪನ್ಯಾಸಕ ದೂರ ಇಟ್ಟಿದ್ದ ಎನ್ನಲಾಗ್ತಿದೆ. ಆರೋಪಿ ಬಸಲಿಂಗನ ಪ್ರಕಾರ ತನ್ನ ಕುಟುಂಬವನ್ನು ತಂದೆ 25 ವರ್ಷಗಳಿಂದ ದೂರವಿಟ್ಟಿದ್ದ. ಈ ಕೋಪಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾನೆ.