ಸಮಗ್ರ ನ್ಯೂಸ್: ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ಅವಹೇಳನಕಾರಿ ಆಗಿ ಬಿಂಬಿಸಿರುವ ಆರೋಪ ಕುರಿತು ಪ್ರತಿಕ್ರಿಯಿಸಿರುವ ವಿವಾದಿತ ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಆಕ್ರೋಶದ ಒಂದು ಭಾಗವಾಗಿ ಬಂದಿದ್ದ ಆ ಬರಹವನ್ನು ನಾನು ಹಂಚಿಕೊಂಡಿದ್ದೆ ಎಂದಿದ್ದಾರೆ.
ಮಂಗಳವಾರ ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ, 2017ರಲ್ಲಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷವು ಆಡಳಿತಾರೂಢವಾಗಿದ್ದಾಗ ಸಚಿವರೊಬ್ಬರು ‘ಕನ್ನಡ ಶಾಲೆಗಳಲ್ಲಿ ಅರೇಬಿಕ್’ ಭಾಷೆ ಕಲಿಸುತ್ತೇವೆ ಎಂಬ ಹೇಳಿಕೆ ಕೊಟ್ಟಾಗ ಅವರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು.
ಆ ಆಕ್ರೋಶದ ಒಂದು ಭಾಗವಾಗಿ ಯಾರೋ ಒಬ್ಬರು ನಾಡಗೀತೆಯ ಧಾಟಿಯಲ್ಲಿ ನಾಲ್ಕು ಸಾಲುಗಳನ್ನು ಬರೆದು ಅಲ್ಲಿ ಆಗಿನ ಕಾಲದ ಸರಕಾರದ ನಡೆಯನ್ನು ಪ್ರಶ್ನಿಸಿದ್ದರು. ವಾಟ್ಸಾಪ್ ಮೂಲಕ ಬಂದಿದ್ದ ಆ ಬರಹವನ್ನು ನಾನು ಫೇಸ್ಬುಕ್ ಜಾಲತಾಣದಲ್ಲಿ ಹಂಚಿಕೊಂಡಿದ್ದೆ ಎಂದು ಉಲ್ಲೇಖಿಸಿದ್ದಾರೆ.
ಯಾರೋ ಬರೆದ ಸಾಲುಗಳನ್ನು, ಅವು ಬೇರೆಯವರದು ಎಂದು ನಾನೇ ಸ್ವತಃ ಉಲ್ಲೇಖಿಸಿದ್ದ ಹೊರತಾಗಿಯೂ, ನನ್ನದೇ ಎಂಬಂತೆ ಬಿಂಬಿಸಿ ನನ್ನ ವ್ಯಕ್ತಿತ್ವಕ್ಕೆ ಅಪಚಾರ ಮಾಡುವ ಕೆಲಸವನ್ನು ಮಾಡುತ್ತಿರುವವರ ಬಗ್ಗೆ ನನಗೆ ಅಪಾರ ದುಃಖ, ಬೇಸರಗಳಿವೆ. ಇನ್ನು, ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ಸ್ವಾಮಿ ನಿರ್ಮಲಾನಂದರು ಹೇಳಿರುವಂತೆ ಕುವೆಂಪು ಅವರು ಬರೆದಿರುವ ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಲಿ. ಅವರನ್ನು ಪತ್ತೆಹಚ್ಚುವ ಕೆಲಸವನ್ನು ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.