ಸಮಗ್ರ ನ್ಯೂಸ್: ಕಳೆದ ಹಲವು ವರ್ಷಗಳಿಂದ ಕೇರಳದ ಕೋಝಿಕ್ಕೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮರ್ಕಝ್ ಸೆಂಟರ್ ಹಲವು ಅನಾಥರಿಗೆ ಆಶ್ರಯ ತಾಣವಾಗಿದೆ. ಈ ಕೇಂದ್ರದ ಅಡಿಯಲ್ಲಿ ಹಲವು ಅನಾಥ ಮಕ್ಕಳು ಗಟ್ಟಿನೆಲೆ ಕಂಡುಕೊಂಡಿದ್ದು ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.
ಲಡಾಖ್ ನಲ್ಲಿ ಉಂಟಾದ ಅಪಘಾತದಲ್ಲಿ ಮೃತಪಟ್ಟ ಯೋಧ ಮಲಪುರಂ ಪರಪ್ಪನಂಗಡಿ ನಿವಾಸಿ ಮೊಹಮ್ಮದ್ ಶೆಜಲ್ ಅವರ ಮೂವರು ಮಕ್ಕಳಾದ 11 ವರ್ಷದ ಫಾತಿಮಾ ಸಂಹಾ, ಎಂಟು ವರ್ಷದ ತಂಝಿಲ್ ಮತ್ತು ಎರಡೂವರೆ ವರ್ಷದ ಫಾತಿಮಾ ಮಹಾಸಾ ಅವರು ಅನಾಥರಾಗಿದ್ದು, ಇವರನ್ನು ದತ್ತು ಪಡೆದುಕೊಳ್ಳಲು ಕೋಝಿಕೋಡ್ ಮರ್ಕಝ್ ತೀರ್ಮಾನಿಸಿದೆ.
ತಮ್ಮ 20 ವರ್ಷಗಳ ಸುದೀರ್ಘ ಮಿಲಿಟರಿ ವೃತ್ತಿಜೀವನದಿಂದ ನಿವೃತ್ತರಾಗುವ ಕೆಲವೇ ತಿಂಗಳುಗಳ ಮೊದಲು ಮೃತಪಟ್ಟ ಶೆಜಲ್ ಅವರ ವಿಯೋಗವು ಕುಟುಂಬದ ದುಃಖವನ್ನು ಇನ್ನಷ್ಟು ಹೆಚ್ಚಿಸಿದೆ ಮತ್ತು ಇದು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಶೆಜಲ್ ಅವರ ಮನೆಗೆ ಭೇಟಿ ನೀಡಿದ್ದ ಮರ್ಕಝ್ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರು ಅನಾಥರಾದ ಶೆಜಲ್ ಅವರ ಮಕ್ಕಳನ್ನು ನೋಡಿಕೊಳ್ಳಲು ತಾವು ಸಿದ್ಧರಿರುವುದಾಗಿ ಶೆಜಲ್ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಹೆತ್ತವರನ್ನು ಕಳೆದುಕೊಳ್ಳುವ ಮಕ್ಕಳನ್ನು ಮರ್ಕಝ್ ಹೋಮ್ ಕೇರ್ ಸ್ಕೀಮ್ ನಲ್ಲಿ ಸೇರಿಸಲಾಗುತ್ತದೆ, ಇದು ಅವರಿಗೆ ತಮ್ಮ ಮನೆಯ ಪರಿಸರದಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಮರ್ಕಝ್ ಇಲ್ಲಿಯವರೆಗೆ ಈ ಯೋಜನೆಯಲ್ಲಿ ಸುಮಾರು 12,000 ಅನಾಥರನ್ನು ದತ್ತು ತೆಗೆದುಕೊಂಡು ಬೆಳೆಸಿದೆ.