ಸಮಗ್ರ ನ್ಯೂಸ್: ಕೇರಳಕ್ಕೆ ಭಾನುವಾರ ಮುಂಗಾರು ಪ್ರವೇಶವಾಗಿದೆ. ಜೂನ್ 2ಕ್ಕೆ ಕರ್ನಾಟಕಕ್ಕೂ ಮಾನ್ಸೂನ್ ಪ್ರವೇಶವಾಗಲಿದ್ದು, ಮಳೆಯ ಆರ್ಭಟ ಹೆಚ್ಚಾಗಲಿದೆ. ಜೂನ್ 2ರೊಳಗೆ ಕರ್ನಾಟಕದ ಕೆಲವು ಭಾಗಗಳಿಗೆ ನೈಋತ್ಯ ಮಾನ್ಸೂನ್ ಅಪ್ಪಳಿಸಲು ಸಿದ್ಧವಾಗಿದೆ. ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದೆ. ಜೂನ್ 2ರಿಂದ ಕರ್ನಾಟಕದಲ್ಲಿ ವರುಣನ ಅಬ್ಬರ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆಯಿದೆ.
ಕಳೆದೊಂದು ತಿಂಗಳಿನಿಂದ ಕರ್ನಾಟಕದಲ್ಲಿ ಹಿಂಗಾರು ಮಳೆಯಾಗುತ್ತಿದೆ. ನಾಳೆಯಿಂದ ರಾಜ್ಯಾದ್ಯಂತ ಮಳೆ ಹೆಚ್ಚಾಗಲಿದೆ. ಜೂನ್ 2ರ ರಾತ್ರಿ ಅಥವಾ ಜೂನ್ 3ಕ್ಕೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು, ಬೆಂಗಳೂರು, ರಾಮನಗರ, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಮುಂಗಾರು ಪ್ರವೇಶವಾಗಲಿದೆ. ಜೂನ್ 2ರಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಭಾರೀ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲೂ ಮಳೆ ಹೆಚ್ಚಾಗಲಿದೆ. ಜೂನ್ 2 ಮತ್ತು 3ರಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.