ಸಮಗ್ರ ನ್ಯೂಸ್: IPL 15ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಪಟ್ಟಕ್ಕೇರಿದೆ. ರಾಜಾಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ 7 ವಿಕೆಟ್ ಗೆಲುವು ಸಾಧಿಸಿ, ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಾಂಡ್ಯ ಬಳಗ ಫೈನಲ್ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಮೊದಲಿಗೆ ಬೌಲಿಂಗ್‌ನಲ್ಲಿ ಪಾರಮ್ಯ ಮೆರೆದ ಗುಜರಾತ್, ನಂತರ ಬ್ಯಾಟಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆದ್ದು ಬೀಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಚಾಂಪಿಯನ್ ಆಗುವ ಕನಸು ನುಚ್ಚುನೂರಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ನಿರ್ಣಾಯಕ ಪಂದ್ಯದಲ್ಲಿ ವೈಫಲ್ಯ ಕಂಡಿತು. 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. ಜೈಸ್ವಾಲ್ 22, ಬಟ್ಲರ್ 39, ಸ್ಯಾಮ್ಸನ್ 14, ಹೆಟ್ಮೈಯರ್ 11, ಆರ್. ಅಶ್ವಿನ್ 6, ರಿಯಾನ್ 15 ರನ್ ಗಳಿಸಿದರು. ಗುಜರಾತ್ ಪರವಾಗಿ ಹಾರ್ದಿಕ್ ಪಾಂಡ್ಯ 3 ವಿಕೆಟ್, ಸಾಯಿಕಿಶೋರ್ 2 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ್ದ ಗುಜರಾತ್ ತಂಡ 18.1 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ವೃದ್ಧಿಮಾನ್ ಸಹಾ 5, ಶುಭಮನ್ ಗಿಲ್ ಅಜೇಯ 45, ಮ್ಯಾಥ್ಯೂ ವೇಡ್ 8, ಹಾರ್ದಿಕ್ ಪಾಂಡ್ಯ 34, ಡೇವಿಡ್ ಮಿಲ್ಲರ್ ಅಜೇಯ 32 ರನ್ ಗಳಿಸಿದರು.