ಸಮಗ್ರ ನ್ಯೂಸ್: ಪೋಷಕರಿಗೆ ಕಿರುಕುಳ ನೀಡುವ ಮತ್ತು ನಿಂದಿಸುವ ಮಕ್ಕಳನ್ನು ಮನೆಯಿಂದ ಹೊರಹಾಕಬೇಕು ಎಂದು ಹರಿದ್ವಾರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿದೆ.
ಪೋಷಕರಿಗೆ ಕಿರುಕುಳ ನೀಡುವ ಮಕ್ಕಳು ಒಂದೇ ತಿಂಗಳಲ್ಲಿ ಮನೆ ಖಾಲಿ ಮಾಡಬೇಕು. ಒಂದು ವೇಳೆ ಆದೇಶ ಪಾಲಿಸದಿದ್ದರೆ ಪೊಲೀಸರು ಕ್ರಮ ಕೈಗೊಳ್ಳುವಂತೆ ಹರಿದ್ವಾರ ಎಸ್‌ಡಿಎಂ ನ್ಯಾಯಾಲಯ ಸೂಚಿಸಿದೆ.
ಉತ್ತರಾಖಂಡ ಹರಿದ್ವಾರದ ಜ್ವಾಲಾಪುರ, ಕಂಖಾಲ್ ಮತ್ತು ರಾವ್ಲಿ ಮೆಹದುದ್ ಸೇರಿ 6 ವೃದ್ಧ ದಂಪತಿ ತಮ್ಮ ಮಕ್ಕಳೇ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದರು.
ಮಕ್ಕಳು ತಮ್ಮೊಂದಿಗೆ ವಾಸಿಸುತ್ತಿದ್ದರೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಮ್ಮ ಆರೋಗ್ಯ ಮತ್ತು ಆಹಾರದ ಬಗ್ಗೆ ಗಮನ ಹರಿಸುವುದಿಲ್ಲ. ಆಗಾಗ್ಗೆ ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ. ಇದರಿಂದ ನಮ್ಮ ಜೀವನ ನರಕವಾಗಿದೆ. ಆದ್ದರಿಂದ ಪೋಷಕರ ಸ್ಥಿರ ಮತ್ತು ಚರಾಸ್ತಿಗಳಿಂದ ಮಕ್ಕಳನ್ನು ಹೊರ ಹಾಕಬೇಕೆಂದು ಮನವಿಯಲ್ಲಿ ಕೋರಿದ್ದರು.
ಈ ಕುರಿತು ವಿಚಾರಣೆ ನಡೆಸಿ, ಎಸ್‌ಡಿಎಂ ನ್ಯಾಯಾಲಯದ ನ್ಯಾಯಾಧೀಶ ಪುರಾನ್ ಸಿಂಗ್ ರಾಣಾ ಅವರು, ತಮ್ಮ ಪೋಷಕರ ಸ್ಥಿರ ಮತ್ತು ಚರಾಸ್ತಿಯಿಂದ ಮಕ್ಕಳನ್ನು ಹೊರಹಾಕುವಂತೆ ಆದೇಶಿದಿಸಿದ್ದಾರೆ.
ಮಕ್ಕಳು ಪೋಷಕರಿಗೆ ವಂಚನೆ ಮಾಡುವ ಹಾಗೂ ಅವರ ಆಸ್ತಿಯನ್ನು ವರ್ಗಾವಣೆ ಮಾಡಿಕೊಳ್ಳುವ ಹಲವಾರು ಪ್ರಕರಣಗಳಿವೆ. ಈ ವಿಚಾರದಲ್ಲಿ ಪೋಷಕರು ನಿರ್ಲಕ್ಷ್ಯ ವಹಿಸುತ್ತಿರುವುದರಿಂದಲೇ ಕಿರುಕುಳ ಎದುರಿಸಬೇಕಾಗುತ್ತಿದೆ ಎಂದು ಹೇಳಿದ್ದಾರೆ.
ಕಾನೂನಿನ ಪ್ರಕಾರ, ಇಂತಹ ಪರಿಸ್ಥಿತಿಯಲ್ಲಿ ವಾಸಿಸುವ ಹಿರಿಯ ನಾಗರಿಕರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಮೂಲಕ ನ್ಯಾಯ ಪಡೆಯಬಹುದು. 2018 ರಲ್ಲಿ ದೆಹಲಿ ನ್ಯಾಯಾಲಯವು, ಹಿರಿಯ ನಾಗರಿಕರನ್ನು ರಕ್ಷಿಸುವ ಕಾನೂನಿನ ಅಡಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆಸ್ತಿಯಿಂದ ಹೊರಹಾಕಬಹುದು ಅಥವಾ ಕಾನೂನು ಬದ್ಧವಾಗಿ ಉತ್ತರಾಧಿಕಾರಿಗಳನ್ನಾಗಿ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.