ಸಮಗ್ರ ನ್ಯೂಸ್: ಸಲೂನಿನಲ್ಲಿ ತಲೆಗೆ ಬಣ್ಣ ಹಚ್ಚಲು ರೇಟ್ ವಿಚಾರಕ್ಕೆ ವಾಗ್ವಾದ ನಡೆದಿದ್ದು ಕತ್ತರಿಯಿಂದ ಇರಿದು ಗ್ರಾಹಕನನ್ನು ಕ್ಷೌರಿಕ ಬರ್ಬರವಾಗಿ ಕೊಂದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದ ಸಲೂನ್ನಲ್ಲಿ ನಡೆದಿದೆ. ಸಾಗರ ಅವಟಿ(22) ಕೊಲೆಯಾದ ಗ್ರಾಹಕ.
ಪ್ರಜ್ವಲ್ ಜೆಂಟ್ಸ್ ಪಾರ್ಲರ್ನ ಸದಾಶಿವ ನಾವಿ ಎಂಬ ಕ್ಷೌರಿಕ ಈ ಕೃತ್ಯ ಎಸಗಿದ್ದಾನೆ. ನಿನ್ನೆ ಸಂಜೆ ಸಾಗರ ಎಂಬ ಯುವಕ ತಲೆಗೆ ಕಲರ್ ಮಾಡಿಸಲು ಸಲೂನ್ಗೆ ಬಂದಿದ್ದ. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ ಮುಂದಾಗಿದ್ದ. ಆಗ ತಲೆಗೆ ಬಣ್ಣ ಹಚ್ಚಲು 20 ರೂ. ಕೊಡುವುದಾಗಿ ಬಣ್ಣ ಹಚ್ಚುತ್ತಿದ್ದ ಸಲೂನ್ ಮಾಲೀಕ ಲಕ್ಷ್ಮಣಗೆ ಸಾಗರ ಹೇಳಿದ್ದ. ಮತ್ತೊಬ್ಬ ಗ್ರಾಹಕನಿಗೆ ಕ್ಷೌರ ಮಾಡುತ್ತಿದ್ದ ಸದಾಶಿವ ನಾವಿ ಗರಂ ಆಗಿದ್ದಾನೆ. ಗ್ರಾಹಕ ಸಾಗರ ಅವಟಿ ಜತೆ ಜಗಳಕ್ಕೆ ಇಳಿದಿದ್ದಾನೆ. ಈ ಹಿಂದೆಯೂ ಸದಾಶಿವ ನಾವಿಯನ್ನು ಸಾಗರ ರೇಗಿಸುತ್ತಿದ್ದ. ಹೀಗಾಗಿ ತನ್ನ ಎಲ್ಲ ಕೋಪವನ್ನು ವ್ಯಕ್ತಪಡಿಸಿ ಈ ಬಾರಿ ಜಗಳಕ್ಕೆ ಇಳಿದಿದ್ದ ಸದಾಶಿವ ನಾವಿ, ಸಾಗರನ ಎದೆಯ ಎಡಭಾಗಕ್ಕೆ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದಾನೆ.
ಗಾಯಾಳು ಸಾಗರನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾಗರ ಅವಟಿ ಮೃತಪಟ್ಟಿದ್ದಾನೆ. ಆರೋಪಿ ಸದಾಶಿವ ನಾವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.