ಸಮಗ್ರ ನ್ಯೂಸ್: ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಜತೆಯಾಗಿ ಬರೆದಿದ್ದ ಮಂಗಳೂರು ತಾಲೂಕಿನ ಉಳ್ಳಾಲದ ತಾಯಿ ಹಾಗೂ ಮಗಳು ಇಬ್ಬರು ಕೂಡ ತೇರ್ಗಡೆಯಾಗಿದ್ದಾರೆ.
ಮುನ್ನೂರು ಗ್ರಾಮದ ತೇವುಲ ನಿವಾಸಿ ಮಮತಾ ರಮೇಶ್ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದು, ಈಕೆಯ ಪುತ್ರಿ ಖುಷಿಯೂ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.
21 ವರ್ಷಗಳ ಹಿಂದೆ ವಿದ್ಯಾರ್ಥಿ ಜೀವನದಲ್ಲಿ ಸ್ವಯಂ ನಿರ್ಧಾರದಿಂದ ಎಸ್ ಎಸ್ ಎಲ್ ಸಿ ಕಲಿಯುವ ಅವಕಾಶದಿಂದ ವಂಚಿತರಾಗಿದ್ದ ಮಮತಾ, ಆನಂತರ ಮೂರು ವರ್ಷಗಳ ಹಿಂದೆ ಪರೀಕ್ಷೆ ಬರೆದರೂ ಯಶಸ್ವಿಯಾಗಿರಲಿಲ್ಲ. ಅಂಗನವಾಡಿ ಶಿಕ್ಷಕಿಯಾಗಲು ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಮನಸ್ಸು ಮಾಡಿ ಪರೀಕ್ಷೆ ಬರೆಯಲು ಧೈರ್ಯ ತೋರಿಸಿದವರು.
ತಾವಿದ್ದ ಮಹಿಳಾ ಸಂಘಟನೆಯ ಕಾರ್ಯಕರ್ತೆ ಕುತ್ತಾರ್ ಲಚ್ಚಿಲ್ ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದ ಮಮತಾ ಸ್ಥಳೀಯ ಜೈ ಹನುಮಾನ್ ಕ್ರೀಡಾ ಮಹಿಳಾ ಸಂಘಟನೆಯಲ್ಲಿ ಬಬ್ಬುಕಟ್ಟೆಯ ಹೀರಾ ಮಹಿಳಾ ಕಾಲೇಜಿನ ಸಹಾಯಕ ಪ್ರಾಂಶುಪಾಲೆ ಭಾಗೀರಥಿ ಅವರ ಪರಿಚಯವಾಗಿತ್ತು. ಅವರ ನಿರ್ದೇಶನದಂತೆ ಪರೀಕ್ಷೆಗೆ ಸಿದ್ಧತೆ ನಡೆಸಿದ ಮಮತಾ ಡಿಸೆಂಬರ್ ತಿಂಗಳಿನಿಂದ ಹಿಡಿದು ಪರೀಕ್ಷೆ ಮುಗಿಸುವವರೆಗೂ ಭಗೀರಥಿ ಅವರು ತಮ್ಮ ಮನೆಯಲ್ಲೇ ಉಚಿತವಾಗಿ ತರಬೇತಿಯನ್ನು ನೀಡಿದ್ದಾರೆ. ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಪರೀಕ್ಷೆಯನ್ನು ಕಟ್ಟಿದ್ದ ಮಮತಾ ಅವರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಪುತ್ರಿ ಖುಷೀ ಉನ್ನತ ಶ್ರೇಣಿಯಲ್ಲಿ ಪಾಸಾದರು.