ಸಮಗ್ರ ನ್ಯೂಸ್: ಕೆನಡಾ ಸಂಸತ್‌ನಲ್ಲಿ ಕನ್ನಡದ ಕಂಪು ಹರಡಿದೆ. ಕೆನಡಾ ದೇಶದ ಲಿಬರಲ್ ಪಕ್ಷದ ಸಂಸದ ಚಂದ್ರ ಆರ್ಯ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
ನಾನು ನನ್ನ ಮಾತೃ ಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಕೆನಡಾ ಪಾರ್ಲಿಮೆಂಟ್‌ನಲ್ಲಿ ಸಂಸದ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿದ್ದಾರೆ.
ಮಾನ್ಯ ಸಭಾಪತಿ ಕೆನಡಾ ಸಂಸತ್‌ನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದ ಅವರು, ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂದು ತಮ್ಮ ಭಾಷಣವನ್ನು ಮುಗಿಸಿದರು.
ಚಂದ್ರ ಆರ್ಯ ಕರ್ನಾಟಕದ ತುಮಕೂರಿನ ಸಿರಾ ತಾಲೂಕಿನ ದ್ವಾರಾಳು ಗ್ರಾಮದವರು. ಅವರು ಕನ್ನಡದಲ್ಲಿ ಮಾತನಾಡುತ್ತಿರುವ ವಿಡಿಯೋ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು 13 ಸಾವಿರಕ್ಕೂ ಹೆಚ್ಚು ಲೈಕ್ಸ್. 2800 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.
ಕೆನಡಾದ ಲಿಬರಲ್ ಪಕ್ಷದ ರಾಜಕಾರಣಿಯಾಗಿರುವ ಚಂದ್ರ ಆರ್ಯ ಅವರು 2015ರ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ನೇಪಿಯನ್ ಆಗಿ ಪ್ರತಿನಿಧಿಸಲು ಆಯ್ಕೆಯಾಗಿದ್ದು, ಮತ್ತು 2019ರಲ್ಲಿ ಫೆಡರಲ್ ಚುನಾವಣೆಯಲ್ಲಿ ಮರು ಚುನಾಯಿತರಾದರು. ಅವರು ಪ್ರಸ್ತುತ ಅಂತಾರಾಷ್ಟ್ರೀಯ ವ್ಯಾಪಾರದ (CIIT) ಸ್ಥಾಯಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.