ಸಮಗ್ರ ನ್ಯೂಸ್: ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ ಇರುವ ನಡುವಯೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸರಕಾರಿ ಶಾಲೆಗಳಲ್ಲಿ ಪ್ರಾರಂಭೋತ್ಸವದ ವೇಳೆ ವೈದಿಕ ಆಚರಣೆ ನಡೆಸಲಾಗಿದೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಈ ಬಗ್ಗೆ ವರದಿ ನೀಡಲು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಡಿಡಿಪಿಐಗೆ ಸೂಚಿಸಿದ್ದಾರೆ.
ಮೇ 16 ರಂದು ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿದ್ದು ಈ ವೇಳೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳಲ್ಲಿ ವಿವಿಧ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಈ ವೇಳೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಡಿಬಾಗಿಲು, ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಹಾಗೂ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸರಕಾರಿ ಶಾಲೆಗಳಲ್ಲಿ ಸೋಮವಾರ ಶಿಕ್ಷಕರ ಸಮ್ಮುಖ ಹೋಮ ಹವನ ನಡೆಸಿದ್ದಾರೆ ಎನ್ನಲಾಗುತ್ತಿರುವ ಚಿತ್ರಗಳು, ಆರತಿ ಬೆಳಗಿ ತಿಲಕ ಹಚ್ಚಿರುವ ಚಿತ್ರಗಳು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಘಟನೆಗೆ ಸಾರ್ವಜನಿಕರ ಒಂದು ವಲಯದಿಂದ ತೀವ್ರ ಆಕ್ಷೇಪ ಎದುರಾಗಿತ್ತು, ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಇದು ಚರ್ಚೆಯನ್ನು ಹುಟ್ಟು ಹಾಕಿತ್ತು.
ಸರಕಾರಿ ಶಾಲೆಗಳಲ್ಲಿ ಹೋಮ ನಡೆದಿರುವ ಬಗ್ಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಖಚಿತಪಡಿಸಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ಡಿಡಿಪಿಐಗೆ ಸೂಚಿಸಲಾಗಿದೆ ಎಂದಿದ್ದಾರೆ.
ಶಾಲಾ ಪ್ರಾರಂಭೋತ್ಸವದಂದು ಶಿಕ್ಷಕರು, ಊರಿನ ಗಣ್ಯರು, ಜನಪ್ರತಿನಿಧಿಗಳು ಮಕ್ಕಳಿಗೆ ಹೂ ನೀಡುವುದು, ಶಾಲೆಯನ್ನು ತಳಿರು ತೋರಣ, ಹೂಗಳಿಂದ ಶೃಂಗರಿಸುವುದು ಕಳೆದ ಕೆಲ ವರ್ಷಗಳಿಂದ ನಡೆದು ಬರುತ್ತಿದೆ.
ಹೋಮ ಹವನಗಳು ಈ ಹಿಂದೆಯು ಕೆಲ ಶಾಲೆಗಳಲ್ಲಿ ನಡೆದಿತ್ತು. ಆದರೆ ರಾಜ್ಯದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಹಿಜಾಬ್ ವಿಚಾರ ತೀವ್ರ ಸ್ವರೂಪ ಪಡೆದು , ನ್ಯಾಯಾಲಯವು ಶಾಲೆಯಲ್ಲಿ ಧಾರ್ಮಿಕ ಅಚರಣೆಯ ಬಗ್ಗೆ ತೀರ್ಪು ನೀಡಿತ್ತು. ಈ ಬೆಳವಣಿಗೆಯ ಭಾಗವಾಗಿ ಶಾಲೆಗಳಲ್ಲಿ ವೈದಿಕ ಆಚರಣೆಗೆ ವಿರೋಧ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ಜಾಲತಾಣಗಳಲ್ಲಿ ಕೂಡಾ ಈ ಬಗ್ಗೆ ಪರ ವಿರೋಧ ಚರ್ಚೆಯಾಗುತ್ತಿದೆ. ಒಂದು ವರ್ಗದ ಜನರನ್ನು ಗುರಿಯಾಗಿಸಿಕೊಂಡು ಹಿಜಾಬ್ ವಿವಾದ ಸೃಷ್ಟಿಯಾಗಿದೆ. ಮತ್ತೊಂದು ವರ್ಗಕ್ಕೆ ಯಾವುದೇ ನಿರ್ಬಂಧವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವರದಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.