ಸಮಗ್ರ ನ್ಯೂಸ್: ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಬಸವರಾಜ ಶೇತಸನದಿ ಅವರ ಮಗಳು ಮಧು ಶೇತಸನದಿ, ಕನ್ನಡ ಮಾಧ್ಯಮದಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದಾಳೆ.
‘ನನ್ನ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂಬುದನ್ನು ಕೇಳಿ ತುಂಬಾ ಸಂತೋಷವಾಗಿದೆ.
ಹಗಲು-ರಾತ್ರಿ ಕಷ್ಟಪಟ್ಟು ಓದಿ ನಮಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಮಗಳು ಡಾಕ್ಟರ್ ಆಗಬೇಕು ಎಂದು ಕನಸು ಕಾಣುತ್ತಿದ್ದಾಳೆ. ಆದರೆ ನನ್ನ ಆದಾಯದಲ್ಲಿ ಅವಳನ್ನು ಓದಿಸುವಷ್ಟು ಆರ್ಥಿಕ ಶಕ್ತಿ ನಮಗಿಲ್ಲ’ ಎಂದು ನೋವು ತೋಡಿಕೊಂಡರು.
‘ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ನಮ್ಮ ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಿದ್ದರು. ಜತೆಗೆ ಟ್ಯೂಶನ್‌ಗೂ ಹೋಗುತ್ತಿದ್ದೆ. ನಿತ್ಯ 6 ತಾಸು ಓದುತ್ತಿದ್ದೆ. 2-3 ಅಂಕಗಳು ಕೈ ತಪ್ಪಬಹುದು ಎಂದುಕೊಂಡಿದ್ದೆ. ಆದರೆ 625ಕ್ಕೆ 625 ಅಂಕ ಬಂದಿರುವುದು ತುಂಬಾ ಸಂತೋಷ ಕೊಟ್ಟಿದೆ. ನನ್ನ ಸಾಧನೆಯಲ್ಲಿ ಅಪ್ಪ-ಅಮ್ಮ (ಕವಿತಾ) ಪಾತ್ರ ದೊಡ್ಡದಿದೆ. ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕು’ ಎಂದು ಗುರಿ ಇಟ್ಟುಕೊಂಡಿರುವುದಾಗಿ ಮಧು ಶೇತಸನದಿ ತಿಳಿಸಿದ್ದಾರೆ.