ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟ ಮುಂದುವರಿದಿದ್ದು, ರಾಜಧಾನಿ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ವಣವಾಗಿದೆ. ಕೆಲ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಗಾಲವನ್ನು ಮೀರಿಸುವ ರೀತಿಯ ವಾತಾವರಣ ಸೃಷ್ಟಿಯಾಗಿದೆ.
ಕೆಲವೆಡೆ ಬೇಸಿಗೆ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದರೆ, ಮಳೆ ಆಶ್ರೀತ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಹೋಬಳಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ಸುರಿದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಗಂಧನಹಳ್ಳಿ ಹೋಬಳಿಯಲ್ಲಿ 231 ಮಿ.ಮೀ. ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಜರಹೊಸಹಳ್ಳಿ ಹೋಬಳಿಯಲ್ಲಿ 187.5 ಮಿ.ಮೀ., ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿ. ಕಾಳೇನಹಳ್ಳಿ ಹೋಬಳಿಯಲ್ಲಿ 177.5 ಮಿ.ಮೀ. ಮಳೆಯಾಗಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.
ಶಾಲೆಗಳಿಗೆ ರಜೆ ಘೋಷಣೆ: ಹಾಸನ ಮತ್ತು ದ.ಕ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಳೆದ 48 ಗಂಟೆಗಳಿಂದೀಚೆಗೆ ಮಳೆರಾಯ ರುದ್ರನರ್ತನ ಮೆರೆಯುತ್ತಿದ್ದು ಗುರುವಾರ ಬೆಳಗ್ಗೆವರೆಗೆ ರೆಡ್ ಅಲರ್ಟ್ ಘೊಷಿಸಲಾಗಿದೆ. ಹೊಳೆನರಸೀಪುರ ತಾಲೂಕಿನ ರಂಗೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹಳೇ ಕಟ್ಟಡ ಭಾರಿ ಮಳೆಯಿಂದ ಬುಧವಾರ ಕುಸಿದುಬಿದ್ದು ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿ ಶಿವಕುಮಾರ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಶಾಲೆಯನ್ನು ಈಚೆಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಹೊಳೆನರಸೀಪುರದಲ್ಲಿ 170.6 ಮಿಮೀ ಅತಿ ಹೆಚ್ಚು ಮಳೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ನಿಗದಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮಗಳು ಮಳೆಯ ಕಾರಣ ರದ್ದಾಗಿದ್ದು, ಮಧ್ಯಾಹ್ನ 2.45ಕ್ಕೆ ಇಲ್ಲಿಗೆ ಆಗಮಿಸಿದ ಅವರು ನೇರವಾಗಿ ಎಐಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾದರು. ಪೂರ್ವನಿಗದಿತ ಪ್ರವಾಸದ ವೇಳಾಪಟ್ಟಿಯಂತೆ ಅವರು ಬೆಳಗ್ಗೆ 11.30ಕ್ಕೆ ಹೆಲಿಕಾಪ್ಟರ್ನಲ್ಲಿ ಆಗಮಿಸಬೇಕಿತ್ತು. ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟ ಮಳೆಯ ಕಾರಣ ಹೆಲಿಕಾಪ್ಟರ್ ಬದಲಿಗೆ ರಸ್ತೆ ಮಾರ್ಗವಾಗಿ ಮಧ್ಯಾಹ್ನ 2.45ಕ್ಕೆ ಆಗಮಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಮಳೆ ಅಬ್ಬರಿಸಿದ್ದು ವಿವಿಧೆಡೆ 30 ಕ್ಕೂ ಹೆಚ್ಚು ಮರಗಳು, ವಿದ್ಯುತ್ ಕಂಬ ಉರುಳಿ ಬಿದ್ದಿವೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ 24 ಗಂಟೆಯಲ್ಲಿ 16.6 ಮಿ.ಮೀ. ಮಳೆ ಸುರಿದಿದೆ. ಬೆಳಗಾವಿ ಮಹಾನಗರ, ಬೈಲಹೊಂಗಲ, ಕಿತ್ತೂರು, ಸವದತ್ತಿ, ಗೋಕಾಕ, ಮೂಡಲಗಿ ಸೇರಿ ವಿವಿಧೆಡೆ ಮಂಗಳವಾರ ರಾತ್ರಿಯಿಡಿ ಧಾರಾಕಾರ ಮಳೆ ಸುರಿದಿದೆ. ಜೋರಾಗಿ ಬಿಸಿದ ಗಾಳಿಯಿಂದ ಹಲವು ಮನೆಗಳ ಪತ್ರಾಸ್ ಹಾರಿಹೋಗಿದ್ದು, ಕೆಲವು ಕಡೆ ಬಾಳೆ, ತರಕಾರಿ ಬೆಳೆಗಳಿಗೆ ಹಾನಿಯಾಗಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮಂಗಳವಾರ ಸಂಜೆಯಿಂದ ಆರಂಭವಾಗಿರುವ ಜಿಟಿ ಜಿಟಿ ಮಳೆ ಬುಧವಾರವೂ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲಿಯೂ ಅನಾಹುತ ಸಂಭವಿಸುವ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೆ ನಿರಂತರವಾಗಿ ಸಣ್ಣಗೆ ಹನಿಯುತ್ತಿದ್ದು, ಅಂತರ್ಜಲವೃದ್ಧಿಗೆ ಸಹಾಯಕವಾಗಿದೆ.