ಸಮಗ್ರ ನ್ಯೂಸ್: ಸುಗ್ರೀವಾಜ್ಞೆ ಮೂಲಕ ಜಾರಿಗೆ ಮಾಡಿದ್ದ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಂತಿಮ ಮುದ್ರೆ ಒತ್ತಿದ್ದಾರೆ. ಇಂದಿನಿಂದ ರಾಜ್ಯದಲ್ಲಿ ಕಾನೂನು ಜಾರಿಗೆ ಬರಲಿದೆ.
ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನ ಪಾಸ್ ಮಾಡಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರಿಂದ ಕಾನೂನು ಈಗ ರಾಜ್ಯದಲ್ಲಿ ಜಾರಿಗೆ ಬರಲಿದೆ. ಈ ಮೂಲಕ ಕರ್ನಾಟಕವು ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದ 9ನೇ ರಾಜ್ಯವಾಗಿದೆ.
ಈ ವಿವಾದಾತ್ಮಕ ಕಾನೂನು ‘ಬಲಪ್ರಯೋಗ, ವಂಚನೆ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ವಿವಾಹದ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವುದನ್ನ’ ನಿಷೇಧಿಸುತ್ತದೆ. ‘ಬಲವಂತದ’ ಮತಾಂತರಕ್ಕೆ 3-5 ವರ್ಷಗಳ ಜೈಲು ಶಿಕ್ಷೆ ಮತ್ತು 25,000 ರೂ.ಗಳ ದಂಡವನ್ನು ಕಾನೂನಿನಲ್ಲಿ ಪ್ರಸ್ತಾಪಿಸಲಾಗಿದೆ.
ಅಪ್ರಾಪ್ತ ವಯಸ್ಕ, ಮಹಿಳೆ ಅಥವಾ ಎಸ್ಸಿ/ಎಸ್ಟಿ ವ್ಯಕ್ತಿಯನ್ನ ಮತಾಂತರ ಮಾಡಿದರೆ 3-10 ವರ್ಷ ಜೈಲು ಶಿಕ್ಷೆ ಮತ್ತು 50,000 ರೂ. ಸಾಮೂಹಿಕ ಮತಾಂತರಕ್ಕೆ 3-10 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ಮತಾಂತರಗೊಳ್ಳಲು ಬಯಸುವ ಜನರು ಕನಿಷ್ಠ 60 ದಿನಗಳ ಮುಂಚಿತವಾಗಿ ಮತ್ತು ಮತಾಂತರದ ನಂತರ 30 ದಿನಗಳ ಒಳಗೆ ಜಿಲ್ಲಾಧಿಕಾರಿಗೆ ಘೋಷಿಸಬೇಕಿದೆ.