ನವದೆಹಲಿ: ಕೊರೋನಾ ಸೋಂಕಿಗೆ ಒಳಗಾಗಿ ದುಡಿದು ಸಾಕುವ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕೆಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ, ಪತ್ರವೊಂದನ್ನು ಬರೆದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿನಂತಿಸಿಕೊಂಡಿದ್ದಾರೆ.
ಇದಕ್ಕಾಗಿ ದೇಶವ್ಯಾಪಿ ಇರುವ ನವೋದಯ ವಿದ್ಯಾಲಯಗಳನ್ನು ಬಳಸಿಕೊಳ್ಳಬಹುದೆಂಬ ಸಲಹೆಯನ್ನೂ ಅವರು ನೀಡಿದ್ದಾರೆ.
ಇದರೊಂದಿಗೆ ತಮ್ಮ ದಿವಂಗತ ಪತಿ ಮತ್ತು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಮಹತ್ತರ ಕೊಡುಗೆಯನ್ನು ಮತ್ತೆ ಸ್ಮರಿಸಿಕೊಂಡಾಗುತ್ತದೆ ಎಂದು ಪತ್ರದಲ್ಲಿ ಸೋನಿಯಾ ಉಲ್ಲೇಖಿಸಿದ್ದಾರೆ
ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳಿಗೆ ನೆರವಾಗಿ, ಉಜ್ವಲ ಭವಿಷ್ಯ ಕಟ್ಟಿಕೊಡುವ ಜವಬ್ಧಾರಿ ದೇಶದ ಮೇಲಿದೆ ಎಂದು ಹೇಳಿದ್ದಾರೆ.
ಕೊವಿಡ್-19 ಎರಡನೇ ಅಲೆ ವಿರುದ್ಧ ಭಾರತದ ಹೋರಾಟ ಜಾರಿಯಲ್ಲಿರುವಂತೆಯೇ, ಸಾವಿರಾರು ಮಕ್ಕಳು ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ, ಕೆಲ ಮಕ್ಕಳ ಒಬ್ಬ ಪಾಲಕರು ಜೀವಂತವಾಗಿದ್ದರೂ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಅವರನ್ನು ನೋಡಿಕೊಳ್ಳುವಂಥ ಸ್ಥಿತಿಯಲ್ಲಿ ಅವರಿಲ್ಲ ಎಂದು ಸೋನಿಯಾ ಹೇಳಿದ್ದಾರೆ.
ಸೋನಿಯಾ ಪುತ್ರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ, ‘ಕೊವಿಡ್ನಿಂದಾಗಿ ತಮ್ಮ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳು ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಅವರು ಮಕ್ಕಳ ಭವಿಷ್ಯವನ್ನು ಕಾಪಾಡುವ ಮತ್ತು ಎನ್ವಿಗಳಲ್ಲಿ ಉಚಿತ ಶಿಕ್ಷಣ ನೀಡಬೇಕು. ಭಾರತ ಸರ್ಕಾರ ಅದನ್ನು ಕಡೆಗಣಿಸಬಾರದು, ಎಂದು ಹೇಳಿದ್ದಾರೆ
ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ಈಗಾಗಲೇ ಅನಾಥರಾಗಿರುವ ಮಕ್ಕಳಿಗೆ ಕೆಲವು ಯೋಜನೆಗಳನ್ನು ಘೋಷಿಸಿ ಅವರ ಯೋಗಕ್ಷೇಮ ನೋಡಿಕೊಳ್ಳುವ ಕಾರ್ಯಕ್ರಮಗಳನ್ನು ರೂಪಿಸಿವೆ.
ಕೆಲ ದಿನಗಳ ಹಿಂದೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕ ಜಿ ಎಸ್ ಬಾಲಿ ಅವರು ರಾಜ್ಯದ ಕಂಗ್ರಾ ಜಿಲ್ಲೆಯಲ್ಲಿ ಕೋವಿಡ್ ಪಿಡುಗಿನಿಂದ ಅನಾಥರಾಗಿರುವ ಎಲ್ಲ ಮಕ್ಕಳನ್ನು ದತ್ತು ಪಡೆಯುವ ಘೋಷಣೆ ಮಾಡಿದ್ದರು.