ಸಮಗ್ರ ನ್ಯೂಸ್: ಕರಾವಳಿ ಭಾಗದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ ನಡುವೆ ಉಡುಪಿ, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಂಗ್ಯೂ ಜ್ವರ ಉಲ್ಬಣದ ಭೀತಿ ಎದುರಾಗಿದೆ. ಹೀಗಾಗಿ ಸೊಳ್ಳೆ ಉತ್ಪತ್ತಿ ತಾಣಗಳ ನಿಷೇಧಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಈಡೀಸ್ ಸೊಳ್ಳೆ ಡೆಂಗ್ಯೂ ಜ್ವರ ಹರಡುತ್ತದೆ. ಹೀಗಾಗಿ ಇದರ ಉತ್ಪತ್ತಿ ತಾಣವನ್ನು ನಾಶ ಮಾಡುವ ಮೂಲಕ ಕಾಯಿಲೆ ವ್ಯಾಪಕವಾಗದಂತೆ ತಡೆಯುವ ಉದ್ದೇಶದಿಂದಾಗಿ ಮೇ 16ರಂದು ಆರೋಗ್ಯ ಇಲಾಖೆಯು ಸೊಳ್ಳೆ ಉತ್ಪತ್ತಿ ತಾಣ ನಾಶ ಅಭಿಯಾನವನ್ನು ದ.,ಕ. ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ.
ಜಿಲ್ಲೆಯಲ್ಲಿ ಸದ್ಯ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಮತ್ತು ಮುಂದಿನ ಕೆಲವು ದಿನಗಳಲ್ಲೇ ಮಳೆಗಾಲ ಅಧಿಕೃತವಾಗಿ ಆರಂಭವಾಗುವುದರಿಂದ ಈಗಿಂದಲೇ ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ನಿಗಾ ವಹಿಸಿ ಅವುಗಳನ್ನು ನಾಶಪಡಿಸಲು ಜನಸಾಮಾನ್ಯರು ಸ್ವಯಂ ಆಸಕ್ತಿ ವಹಿಸಬೇಕು. ಸ್ವಚ್ಛ ನೀರು ನಿಂತ ಜಾಗಗಳಲ್ಲೇ ಈ ಸೊಳ್ಳೆ ಉತ್ಪತ್ತಿಗೆ ಪೂರಕ ತಾಣವಾಗಿದೆ. ಹೀಗಾಗಿ ಮನೆಯ ಟೆರೇಸ್ ಮೇಲೆ, ತೆಂಗಿನ ಚಿಪ್ಪಿ, ಬಾಟಲಿ, ಹೂವಿನ ಕುಂಡ, ಡ್ರಮ್, ಬಕೆಟ್ ಅಥವಾ ಇತರ ಯಾವುದೇ ಪರಿಕರಗಳಲ್ಲಿ ಎರಡು ದಿನಗಳಿಗಿಂತ ಹೆಚ್ಚು ಕಾಲ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಲ್ಲದೆ, ಮನೆಯ ಸಿಂಕ್‌ಗಳಲ್ಲಿಯೂ ನೀರು ನಿಲ್ಲದಂತಿರಲು ಅಗತ್ಯ ಜಾಗೃತಿ ವಹಿಸಬೇಕು. ವಾರಕ್ಕೊಮ್ಮೆಯಾದರೂ ಮನೆ ಸುತ್ತಮುತ್ತ ನೀರು ನಿಲ್ಲುವ ಜಾಗಗಳನ್ನು ಹುಡುಕಿ ನೀರು ಹರಿದು ಹೋಗುವಂತೆ ಮಾಡಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.