ಸಮಗ್ರ ನ್ಯೂಸ್: ಕೆಲ ಸಮಯದಿಂದ ಪರ-ವಿರೋಧಕ್ಕೆ ಕಾರಣವಾಗಿದ್ದ ಬಲವಂತದ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ವಿಧಾನಸಭೆಯಲ್ಲಿ ಅನುಮೋದನೆಗೊಂಡು, ಪರಿಷತ್ತಿನಲ್ಲಿ ಬಾಕಿ ಉಳಿದುಕೊಂಡಿದ್ದ ‘ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧ್ಯಾದೇಶ, 2022’ಕ್ಕೆ ಮೇ 12ರಂದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಂಪುಟದ ತೀರ್ವನವನ್ನು ಶುಕ್ರವಾರ ರಾಜಭವನಕ್ಕೆ ಕಳಿಸಲಾಗುತ್ತದೆ. ರಾಜ್ಯಪಾಲರು ಕಾನೂನು ತಂಡದ ಜತೆ ಸಮಾಲೋಚಿಸಿ ಸುಗ್ರೀವಾಜ್ಞೆಗೆ ಸಹಿ ಹಾಕಿದ ಕೂಡಲೇ ಮತಾಂತರ ನಿಷೇಧ ಕಾನೂನು ಜಾರಿಗೆ ಬರಲಿದೆ. ಪ್ರಕ್ರಿಯೆಯ ಮುಂದಿನ ಭಾಗವಾಗಿ ಆರು ತಿಂಗಳೊಳಗೆ ಅಥವಾ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆದುಕೊಂಡರೆ ಸಾಕು. ಅಲ್ಲಿಯವರೆಗೆ ಕಾನೂನು ಜಾರಿಗೆ ಸರ್ಕಾರಕ್ಕೆ ಸಂವಿಧಾನಬದ್ಧ ಅವಕಾಶ ಇರಲಿದೆ.
ಸುಗ್ರೀವಾಜ್ಞೆ ತಿರಸ್ಕರಿಸಿ – ಸಿದ್ದರಾಮಯ್ಯ:
ಈ ನಡುವೆ ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶದಿಂದ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಬಗ್ಗೆ ತಿಳಿಸಿರುವ ಅವರು, ‘ಸುಗ್ರಿವಾಜ್ಞೆ ಮೂಲಕ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ ಜಾರಿಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ತೀರ್ಮಾನ ಅಲ್ಪಸಂಖ್ಯಾತರನ್ನು ಬೆದರಿಸುವ ಹಾಗೂ ಅವರಿಗೆ ಕಿರುಕುಳ ನೀಡುವ ಉದ್ದೇಶ ಹೊಂದಿದೆ. ಇದು ಸಂಘ ಪರಿವಾರದ ರಾಜಕೀಯ ಹಿಂದುತ್ವದ ಅಜೆಂಡಾ ಆಗಿದೆ. ಇದನ್ನು ಸಹೃದಯ ಹಿಂದು ಬಾಂಧವರೆಲ್ಲರೂ ಖಂಡಿಸಬೇಕು’ ಎಂದು ಕರೆ ನೀಡಿದ್ದಾರೆ.