ಸಮಗ್ರ ನ್ಯೂಸ್: ಜಮ್ಮುವಿನ ಕತ್ರಾ ಬಳಿ ವೈಷ್ಣೋದೇವಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘೋರ ದುರಂತ ಶುಕ್ರವಾರ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ.
ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಕತ್ರಾದಿಂದ ಜಮ್ಮುವಿಗೆ ತೆರಳುತ್ತಿದ್ದಾಗ ಹಠಾತ್ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.
ದೆಹಲಿಯಲ್ಲಿ 27 ಮಂದಿ ಸಾವು!
ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೊ ನಿಲ್ದಾಣ ಸಮೀಪದ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ 27 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 40ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೆಟ್ರೊದ 544ನೇ ಸಂಖ್ಯೆಯ ಪಿಲ್ಲರ್ ಬಳಿಯ ಕಟ್ಟಡದಲ್ಲಿ ಸಂಜೆ 4.40ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಕೂಡಲೇ 30ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ, ಕಟ್ಟಡದಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದರು.
ಕಟ್ಟಡದ 2ನೇ ಅಂತಸ್ತಿನ ಕೊಠಡಿಯಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದೆ. ಈ ಕೊಠಡಿಗೆ ಹೊರಗಿ ನಿಂದ ಬೀಗ ಹಾಕಲಾಗಿತ್ತು. ಕಟ್ಟಡದ ಮಾಲೀಕನನ್ನು ಬಂಧಿಸಿ, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘ಬೆಂಕಿ ಅವಘಡ ನಡೆದ ಕಟ್ಟಡದ 2ನೇ ಅಂತಸ್ತಿನಲ್ಲಿ ಸುಮಾರು 150 ಮಂದಿಯಿದ್ದರು. ಇದರಲ್ಲಿ 70-90 ಮಂದಿಯನ್ನು ರಕ್ಷಿಸಲಾಯಿತು. ಕೆಲವರು ಕಟ್ಟಡದ ಮೇಲಿನಿಂದ ಜಿಗಿದರು. ಇನ್ನು ಕೆಲವರು ಹಗ್ಗದ ನೆರವಿನಿಂದ ಇಳಿದರು’ ಎಂದು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯೊಬ್ಬರು ಹೇಳಿದರು.
₹2 ಲಕ್ಷ ಪರಿಹಾರ: ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ಪರಿಹಾರ ನಿಧಿಯಿಂದ ₹2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ₹50,000 ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.