ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮದ್ಯದ ಬೆಲೆ ಇಳಿಕೆಗೆ ಚಿಂತನೆ ನಡೆಸಲಾಗಿದೆ. ವೈನ್, ವಿಸ್ಕಿ ಸೇರಿ ಕೆಲ ಮದ್ಯಗಳ ಬೆಲೆ ಇಳಿಕೆ ಮಾಡಲು ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಿದೆ.
ದುಬಾರಿ ಮದ್ಯದ ಬೆಲೆ ಇಳಿಕೆ ಮಾಡಿದರೆ ಮಾರಾಟ ಹೆಚ್ಚಳವಾಗಿ ಆದಾಯ ಸಂಗ್ರಹಣೆ ಅಧಿಕವಾಗುತ್ತದೆ. ಈ ಮೂಲಕ ವಾರ್ಷಿಕ 5000 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಣಾ ಗುರಿಗೆ ರಾಜ್ಯ ಸರ್ಕಾರ ಚರ್ಚೆ ನಡೆಸಿದೆ ಎನ್ನಲಾಗಿದೆ.
ಈಗಾಗಲೇ ರಾಷ್ಟ್ರರಾಜಧಾನಿ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ದುಬಾರಿ ದರದ ಮದ್ಯದ ಬೆಲೆ ಕಡಿಮೆ ಮಾಡಲಾಗಿದ್ದು, ಇದೀಗ ರಾಜ್ಯದಲ್ಲೂ ವಿಸ್ಕಿ, ವೈನ್ ಸೇರಿದಂತೆ ಹಲವು ಮದ್ಯಗಳ ಬೆಲೆ ಕಡಿಮೆ ಮಾಡಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ರಾಜ್ಯದಲ್ಲಿ ಕಳೆದ ವರ್ಷ ಅಬಕಾರಿ ಇಲಾಖೆ 26 ಸಾವಿರ ಕೋಟಿ ರೂ. ಗುರಿ ತೆರಿಗೆ ಸಂಗ್ರಹಣೆಯಾಗಿದ್ದು, ಈ ಸಾಲಿನಲ್ಲಿ 29 ಸಾವಿರ ರೂ. ಗುರಿ ಹಾಕಿಕೊಳ್ಳಲಾಗಿದೆ. ಮದ್ಯದ ದರ ಕಡಿಮೆಯಾದರೆ 34 ಸಾವಿರ ಕೋಟಿ ರೂ. ತನಕ ಸಂಗ್ರಹಣೆಗೆ ಅವಕಾಶ ಇದೆ ಎನ್ನಲಾಗಿದೆ.