ಬೆಂಗಳೂರು: ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಎಲ್ಲೆಲ್ಲಿ, ಯಾವ ಆಸ್ಪತ್ರೆಯಲ್ಲಿ ಏನೆಲ್ಲಾ ಅನಾಹುತ ನಡೆಯುತ್ತಿದೆ ಎಂಬ ಮಾಹಿತಿ ನನಗೆ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ
ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು. ಇದು ಸಂವಿಧಾನ ಬದ್ಧವಾಗಿ ಬಂದಿರುವ ಹುದ್ದೆ, ಅಧಿಕಾರ. ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಜಿಲ್ಲೆ ಪ್ರವಾಸ ಮಾಡಿ ಅಧಿಕಾರಿಗಳ ಜತೆ ಸಭೆ ಮಾಡಿಲ್ಲವೇ? ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಯಾವ ರೀತಿ ನೆರವು ಮಾಡುತ್ತಿದ್ದಾರೆ ಎಂದು ಪರಿಶೀಲಿಸಲು ಅಡ್ಡಿ ಮಾಡುತ್ತಿರುವುದು, ಇವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ನಾಶ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ” ಎಂದು ಕಿಡಿಕಾರಿದ್ದಾರೆ.
ನಾವು ಬಳ್ಳಾರಿಗೆ ಪ್ರವಾಸ ಮಾಡಬೇಕಿತ್ತು. ಆದರೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಲಾಗಿದೆ. ಅವರು ಎಷ್ಟೇ ಮುಚ್ಚಿಟ್ಟರೂ ಎಲ್ಲೆಲ್ಲಿ, ಯಾವ ಆಸ್ಪತ್ರೆಯಲ್ಲಿ ಏನೇನು ಹೆಚ್ಚುಕಮ್ಮಿ ಆಗುತ್ತಿದೆ ಎಂಬುದು ನಮಗೆ ತಿಳಿಯುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇವೆಗೆ ಮೆಚ್ಚಿ ಸಹಕಾರ: ಕಾಂಗ್ರೆಸ್ ಕೇರ್ ಸೆಂಟರ್ ಮೂಲಕ 150ಕ್ಕೂ ಹೆಚ್ಚು ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಇದನ್ನು ಗಮನಿಸಿ ಅನೇಕ ದಾನಿಗಳು ನಮಗೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಇದನ್ನು ನೋಡಿ ಅಟಿಕಾ ಕಂಪನಿಯವರು ಸೇವೆ ಮಾಡಲು ಮುಂದೆ ಬಂದಿದ್ದಾರೆ. ಅವರು ಹಣ ಕೊಡಲು ಮುಂದಾಗಿದ್ದರು. ಹಣ ಬೇಡ, ಕಷ್ಟಕಾಲದಲ್ಲಿ ಅಗತ್ಯ ವಸ್ತುಗಳನ್ನು ನೀಡಿ ಎಂದು ಹೇಳಿದೆವು. ಹೀಗಾಗಿ ಸುಮಾರು 25 ಲಕ್ಷ ರೂ. ಮೊತ್ತದ 7.5 ಲೀಟರ್ ಆಕ್ಸಿಜನ್ ಕಾನ್ಸಟ್ರೇಟರ್‌ಗಳನ್ನು ಕೊಟ್ಟಿದ್ದಾರೆ. ಇದನ್ನು ಅಗತ್ಯ ಇರುವವರಿಗೆ ಹಂಚುವ ಕೆಲಸ ಮಾಡುತ್ತೇವೆ ಎಂದರು.