ಸಮಗ್ರ ನ್ಯೂಸ್: ಮಲ್ಪೆ ಬೀಚ್‌ನಲ್ಲಿ ನಿರ್ಮಿಸಿದ ರಾಜ್ಯದ ಮೊದಲ ತೇಲುವ ಸೇತುವೆ ಉದ್ಘಾಟನೆಯಾದ ಮೂರೇ ದಿನಕ್ಕೆ ಸಮುದ್ರದಲ್ಲಿ ಕೊಚ್ಚಿಹೋದ ಘಟನೆ ನಡೆದಿದ್ದು, ಇದು ರಾಜ್ಯ ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರದ ಫಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮೊದಲ ತೇಲುವ ಸೇತುವೆ ಮೇ 6ರ ಶುಕ್ರವಾರದಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ಅವರು ಸಮ್ಮುಖದಲ್ಲಿ ಉದ್ಘಾಟನೆಗೊಂಡಿತ್ತು. 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆಯನ್ನು ಸುಮಾರು 80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
ವಿಡಿಯೋಗಾಗಿ ಕೆಳಗಿನ ಲಿಂಕ್ ತೆರೆಯಿರಿ
ಭಾನುವಾರ ಸಂಜೆಯವರೆಗೂ ಹಲವಾರು ಪ್ರವಾಸಿಗರು ಸೇತುವೆಯಲ್ಲಿ ನಡೆದಾಡಿದ್ದರು. ಆದರೆ, ಸೋಮವಾರ ಬೆಳಗ್ಗೆ ಪ್ರವಾಸಿಗರು ಸಮುದ್ರ ತೀರಕ್ಕೆ ಬಂದಾಗ ಸೇತುವೆಯ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಸಮುದ್ರದ ಬದಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಸೇತುವೆಯ ಈ ಅವಸ್ಥೆಗೆ ರಾಜ್ಯ ಬಿಜೆಪಿಯ 40% ಭ್ರಷ್ಟಾಚಾರವೇ ಕಾರಣ ಎಂದು ಹೇಳಿದ್ದಾರೆ.
ಕನ್ನಡ ಪರ ಹೋರಾಟಗಾರ ದಿನೇಶ್ ಕುಮಾರ್ ಅವರು, “ಭ್ರಷ್ಟ ಸರ್ಕಾರದ 40% ಕಮಿಷನ್ ಸೇತುವೆ ಮೂರೇ ದಿನಗಳಿಗೆ ಮುರಿದು ಸಮುದ್ರದ ಪಾಲಾಯ್ತು” ಎಂದು ಕಿಡಿ ಕಾರಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕೆ.ಆರ್. ಪ್ರಗತ್ ಅವರು, “20% ಕೇಂದ್ರಕ್ಕೆ 20% ರಾಜ್ಯಕ್ಕೆ. ಒಟ್ಟು 40%. ಉಡುಪಿ ಜಿಲ್ಲೆಯ ಪ್ರವಾಸಿ ಆಕರ್ಷಣೆಯ ಕೇಂದ್ರವಾಗಬೇಕಿದ್ದ ಮಲ್ಪೆಯ ಕೋಟಿ ವೆಚ್ಚದ ತೇಲು ಸೇತುವೆ, ಬಿಜೆಪಿ ಕಮೀಷನ್ ಆಸೆಗೆ ಮಣ್ಣುಪಾಲಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.