ಸಮಗ್ರ ನ್ಯೂಸ್: ಆಗ್ನೇಯ ಬಂಗಾಳಕೊಲ್ಲಿಯಲ್ಲಿನ ಅಸಾನಿ ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ‘ತೀವ್ರ ಚಂಡಮಾರುತ’ವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಸಾನಿ ಚಂಡಮಾರುತದ ತೀವ್ರತೆಯಿಂದ ಸೋಮವಾರ ಮತ್ತು ಮಂಗಳವಾರ ವಿವಿಧ ರಾಜ್ಯಗಳಲ್ಲಿ ಮಳೆಯಾಗಲಿದೆ. ಬುಧವಾರದ ನಂತರದಲ್ಲಿ ಪ್ರಭಾವ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತ ಹಿನ್ನಲೆ ಕರ್ನಾಟಕದ 27 ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದ್ದು, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ, ಕೊಡಗು, ರಾಮನಗರ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ನಾಳೆ ( ಮೇ 9) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಸಾನಿ ಚಂಡಮಾರುತವು ಮೇ 10ರ ಸಂಜೆಯವರೆಗೆ ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಮತ್ತು ಉತ್ತರ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಯಾಚೆ ಬಂಗಾಳ ಕೊಲ್ಲಿಯ ಪಶ್ಚಿಮ ಮಧ್ಯ ಮತ್ತು ನೆರೆಯ ವಾಯುವ್ಯವನ್ನು ತಲುಪುವ ಹೆಚ್ಚಿನ ಸಾಧ್ಯತೆಯಿದೆ. ಬಳಿಕ ಅದು ಉತ್ತರ-ವಾಯುವ್ಯದತ್ತ ತಿರುವು ಪಡೆದುಕೊಂಡು ಒಡಿಶಾ ಕರಾವಳಿಯಾಚೆ ಬಂಗಾಳ ಕೊಲ್ಲಿಯ ವಾಯುವ್ಯದತ್ತ ಚಲಿಸಲಿದೆ ಎಂದು ಆಂಧ್ರದ ಆಮರಾವತಿಯ ಹವಾಮಾನ ಕೇಂದ್ರವು ಹೇಳಿದೆ.
ಪರಿಸ್ಥಿತಿಯನ್ನು ಎದುರಿಸಲು ಒಡಿಶಾ ಮತ್ತು ಪ.ಬಂಗಾಳ ಸರಕಾರಗಳು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ.