ಸಮಗ್ರ ನ್ಯೂಸ್: ಮಂಗಳೂರು ನಗರದ ಕುಂಟಿಕಾನದ ಬಳಿ ರಾತ್ರಿ ವೇಳೆ ಬಾವಿಗೆ ಬಿದ್ದು ಗಾಯಗೊಂಡಿದ್ದ ಯುವಕನೋರ್ವನನ್ನು ಕದ್ರಿ ಅಗ್ನಿಶಾಮಕ ಸಿಬಂದಿಗಳು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಸ್ತೆ ಬದಿಯ ಮನೆಯೊಂದರ ಬಳಿ ಮುಂಜಾನೆಯಿಂದಲೇ ಯುವಕನ ಬೊಬ್ಬೆಕೇಳುತ್ತಿತ್ತು. ಹುಡುಕಾಡಿದಾಗ ಆತ ಬಾವಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕದವರು ಕಾರ್ಯಚರಣೆ ನಡೆಸಿ ಯುವಕನನ್ನು ಮೇಲಕ್ಕೆತ್ತಿದ್ದಾರೆ.
ಈತನನ್ನು 25ರಿಂದ 26 ವರ್ಷ ವಯಸ್ಸಿನ ಅಸ್ಸಾಂ ಮೂಲದ ಯುವಕನೆಂದು ಗುರುತಿಸಲಾಗಿದೆ. ಈತ ಅಲ್ಲಿಗೆ ಯಾಕೆ ಬಂದಿದ್ದ, ಹೇಗೆ ಬಾವಿಗೆ ಬಿದ್ದ ಎಂಬುದು ತಿಳಿದುಬಂದಿಲ್ಲ.
ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ತನಿಖೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಕದ್ರಿ ಅಗ್ನಿಶಾಮಕ ಠಾಣಾಧಿಕಾರಿ ಸುನಿಲ್ ಕುಮಾರ್, ಪ್ರಮುಖ ಅಗ್ನಿಶಾಮಕ ಸಿಬಂದಿಯಾದ ಸುದರ್ಶನ್, ಚಂದ್ರಹಾಸ ಸಾಲ್ಯಾನ್, ಚಾಲಕ ದಯಾಕರ್, ಪ್ರದೀಪ್, ಪ್ರಭಾಕರ್, ಗೃಹರಕ್ಷಕ ಸಿಬಂದಿ ಕನಕಪ್ಪ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.