ಸಮಗ್ರ ನ್ಯೂಸ್: ಮನೆ ಕೆಲಸಗಾರನ ಮೇಲೆ ಹಲ್ಲೆ ನಡೆಸಿದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ಕೈ ಮಾಡಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಡಬ ತಾಲೂಕಿನ ಕೌಕ್ರಾಡಿ ಮಣ್ಣಗುಂಡಿ ನಿವಾಸಿ ಬಿಜಿ ಎಂ. ಅವರ ಮನೆ ಕೆಲಸಗಾರ ಕುಮಾರ್ ಅವರು ಏಪ್ರಿಲ್ 27ರಂದು ಬಿಜಿ ಅವರ ಮನೆಯಿಂದ ಸಾಕು ದನವನ್ನು ಕೊಂಡೊಯ್ಯುವಾಗ ಮಹೇಶ್ ಮತ್ತು ಇತರ ಮೂವರು ಕುಮಾರ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಇದನ್ನು ನೋಡಿದ ಮೋಹನ್ ಎಂಬವರು ಬಿಜಿ ಅವರಿಗೆ ಮಾಹಿತಿ ನೀಡಿದ್ದು, ತತ್‌ಕ್ಷಣ ಬಿಜಿ ಅಟೋರಿಕ್ಷಾದಲ್ಲಿ ಆಗಮಿಸಿ ಹಲ್ಲೆಕೋರರನ್ನು ಯಾಕೆ ಹಲ್ಲೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರಶ್ನಿಸಿದ್ದಕ್ಕೆ ಹಲ್ಲೆಕೋರರಲ್ಲಿ ಓರ್ವ ಮಹಿಳೆಯ ಟೀ ಶರ್ಟ್ ಹಿಡಿದು ಕುತ್ತಿಗೆ ಮತ್ತು ತಲೆಗೆ ಕೈಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಹಿಳೆಯ ಮಾಂಗಲ್ಯ ಸರ ಮತ್ತು ಓಲೆ ಕೆಳಗೆ ಬಿದ್ದಿದೆ. ಬಳಿಕ ಯಾವುದೋ ಚೈನ್‌ನಿಂದ ಮಹಿಳೆಯ ಎಡಕೈ ತೋಳಿಗೆ ಹಲ್ಲೆ ನಡೆಸಿದ್ದಾರೆ. ಆರೋಪಿತರು ಮಹಿಳೆಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿ ಚಿಕಿತ್ಸಾ ವೆಚ್ಚವನ್ನೂ ಭರಿಸಿಲ್ಲ ಎಂದು ದೂರುದಾರ ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಮಹೇಶ್ ಮತ್ತು ಇತರ ಮೂವರ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ.