ಸಮಗ್ರ ನ್ಯೂಸ್: ಲಾರಿ ಹಾಗೂ ಇವೋವಾ ಕಾರಿನ ನಡುವೆ ತುಮಕೂರಿನ ಚಿಕ್ಕ ಶೆಟ್ಟಿ ಕೆರೆ ಬಳಿ ಡಿಕ್ಕಿ ಸಂಭವಿಸಿದ್ದು, ದುರ್ಘಟನೆಯಲ್ಲಿ ನವ ವರ ಸೇರಿ ಮೂವರು ದರ್ಮರಣವನ್ನಪ್ಪಿದ್ದಾರೆ.
ಮೃತರನ್ನು ಅರಸೀಕೆರೆ ತಾಲೂಕಿನ ಕಮಲಾಪುರ ವಾಸಿ ನಂಜುಂಡಪ್ಪ ಅವರ ಮಗ ಪ್ರಸನ್ನಕುಮಾರ್ (30), ಸಂತೋಷ್ (29), ಚಾಲಕ ಚಿನ್ನಪ್ಪ (30) ಎಂದು ಗುರ್ತಿಸಲಾಗಿದೆ.
ವಾರದ ಹಿಂದೆಯಷ್ಟೇ ಅರಸೀಕೆರೆ ತಾಲೂಕಿನ ಕಮಲಾಪುರ ಗ್ರಾಮದ ಪ್ರಸನ್ನಕುಮಾರ್ ಅವರಿಗೆ ಅದೇ ಗ್ರಾಮದ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ ಎಂಬುವವರ ಜೊತೆ ವಿವಾಹವಾಗಿತ್ತು.
ಮನೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬೆಂಗಳೂರಿನಿಂದ ಕಮಲಾಪುರಕ್ಕೆ ಕಾರಿನಲ್ಲಿ ಆಗಮಿಸಿದ್ದರು. ನಸುಕಿನ ಜಾವ ಬೆಂಗಳೂರಿನತ್ತ ಮಾಯಸಂದ್ರ ಮಾರ್ಗವಾಗಿ ಸಂಬಂಧಿ ಸಂತೋಷ್ ಹಾಗೂ ಚಾಲಕ ಚಿನ್ನಪ್ಪ ಅವರೊಂದಿಗೆ ಪ್ರಯಾಣ ಬೆಳೆಸಿದ್ದರು.
ಚಿಕ್ಕ ಶೆಟ್ಟಿಕೆರೆ ಬಳಿ ಮೈಸೂರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಆಶ್ಚರ್ಯಕರ ರೀತಿಯಲ್ಲಿ ನವ ವಧು ಮಂದಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.