ಹೈದರಾಬಾದ್: ಕೊರೊನಾ ಬಂದ ನಂತರ ಕೆಲಸ ಗಿಟ್ಟಿಸಿಕೊಳ್ಳುವುದು ಮೊದಲಿನಷ್ಟು ಸುಲಭವಿಲ್ಲ. ಎಷ್ಟೇ ಬುದ್ಧಿವಂತಿಕೆಯಿದ್ದರೂ ಅವಕಾಶದ ಬಾಗಿಲುಗಳು ತೆರೆಯದೇ ಅನೇಕರು ನಿರುದ್ಯೋಗಿಗಳಾಗಿ ಉಳಿದಿದ್ದಾರೆ. ಇನ್ನು ಕೆಲವರು ಕೈ ತುಂಬಾ ಸಂಬಳ ನೀಡುವ ಒಳ್ಳೆಯ ಕೆಲಸವನ್ನು ಕಳೆದುಕೊಂಡು ಅನಿವಾರ್ಯವಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ.
ಇಂತಹ ಕಾಲದಲ್ಲಿ ಹೈದರಾಬಾದ್ನ ಯುವತಿಯೊಬ್ಬಳಿಗೆ ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ವಾರ್ಷಿಕ 2ಕೋಟಿ ರೂಪಾಯಿ ಸಂಬಳ ನೀಡುವುದಾಗಿ ಹೇಳಿ ಕೆಲಸ ನೀಡಿದೆ. ಹೈದರಾಬಾದ್ ಮೂಲದ ದೀಪ್ತಿ ನಾರ್ಕುತಿ ಎಂಬ ಯುವತಿಗೆ ಇಷ್ಟು ದೊಡ್ಡ ಮಟ್ಟದ ಕೆಲಸ ಸಿಕ್ಕಿದ್ದು, ಆಕೆ ತನ್ನ ಲಿಂಕ್ಡ್ ಇನ್ ಖಾತೆಯಲ್ಲಿ ಹೇಳಿಕೊಂಡಿರುವಂತೆ ಮೈಕ್ರೋಸಾಫ್ಟ್ನಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಅಮೆರಿಕಾ ದೇಶದ ಸಿಯಾಟಲ್ನಲ್ಲಿ ಇರುವ ಮೈಕ್ರೋಸಾಫ್ಟ್ ಸಂಸ್ಥೆಯ ಪ್ರಧಾನ ಕಾರ್ಯಾಲಯದಲ್ಲಿ ದೀಪ್ತಿ ಕೆಲಸ ಮಾಡಲಿದ್ದು, ಓದು ಮುಗಿಸುತ್ತಿದ್ದಂತೆಯೇ ಭಾರೀ ವೇತನದ ಕೆಲಸ ಸಿಕ್ಕಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಫ್ಲಾರಿಡಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ದೀಪ್ತಿ ಗಣಕ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ವಿದ್ಯಾಭ್ಯಾಸ ಮುಗಿಸುವ ಮುನ್ನವೇ ಆಕೆಗೆ ಅತ್ಯುನ್ನತ ಕಂಪೆನಿಗಳಿಂದ ಆಫರ್ ಬಂದಿತ್ತು ಎನ್ನಲಾಗಿದೆ.
ಅಮೆಜಾನ್, ಗೋಲ್ಡ್ಮನ್, ಸಚ್ಸ್ನಂತಹ ಸಂಸ್ಥೆಗಳು ಭಾರೀ ವೇತನದ ಕೆಲಸ ನೀಡುವುದಾಗಿ ಹೇಳಿದ್ದವು. ಕ್ಯಾಂಪಸ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಸುಮಾರು 300 ವಿದ್ಯಾರ್ಥಿಗಳ ಪೈಕಿ ದೀಪ್ತಿ ವಾರ್ಷಿಕ 2 ಕೋಟಿ ರೂಪಾಯಿ ವೇತನ ನೀಡುವ ದೊಡ್ಡ ಮಟ್ಟದ ಕೆಲಸಕ್ಕೆ ಆಯ್ಕೆಯಾಗಿದ್ದಾರೆ.