ಸಮಗ್ರ ನ್ಯೂಸ್: ಬುಡಕಟ್ಟು ಜನಾಂಗದವರ ಮಧ್ಯೆ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಮಾರಾಮಾರಿಯಲ್ಲಿ ಬರೋಬ್ಬರಿ 175ಕ್ಕೂ ಹೆಚ್ಚು ಜನರ ಬಲಿಯಾಗಿದೆ. ಅರಬ್ಬರು ಮತ್ತು ಆಫ್ರಿಕನ್ ಮಸಲಿತ್ ಬುಡಕಟ್ಟುಗಳ ನಡುವೆ ಉಂಟಾದ ಹಿಂಸಾಚಾರ ಮುಂದುವರೆದಿದ್ದು, ನೂರಾರು ಜನರನ್ನು ಬಲಿ ಪಡೆದಿದೆ. ಐದು ದಿನಗಳಲ್ಲಿ 175ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಬುಡಕಟ್ಟು ಜನಾಂಗದ ಮಾರಾಮಾರಿ ತಡೆಯಲು ಸೂಡಾನ್ ಸರ್ಕಾರ ಪಶ್ಚಿಮ, ಧಾರ್‍ಪುರ್ ಪ್ರಾಂತ್ಯಕ್ಕೆ ಮತ್ತಷ್ಟು ಸೇನಾಪಡೆಗಳನ್ನು ನಿಯೋಜಿಸಿದೆ. ರಾಜಧಾನಿ ಜಿನೇನಾದಿಂದ 80ಕಿ.ಮೀ. ಪೂರ್ವಕ್ಕೆ ಕ್ರೆನಿನ್ ಪಟ್ಟಣದಲ್ಲಿ ಅರಬ್ಬರು ಮತ್ತು ಆಫ್ರಿಕನ್ ಮಸಲಿತ್ ಬುಡಕಟ್ಟು ಜನಾಂಗದ ನಡುವೆ ಮಾರಾಮಾರಿ ನಡೆದಿದ್ದು, ಈ ಘರ್ಷಣೆ ಜಿನೇನಾ ತಲುಪಿದೆ.
ಇಲ್ಲಿನ ಮುಖ್ಯ ಮಾರುಕಟ್ಟೆಯಲ್ಲಿ ಅಧಿಕಾರಿಗಳು ನಿನ್ನೆ ರಾತ್ರಿಯಿಂದ ಕಫ್ರ್ಯೂ ಘೋಷಿಸಿದ್ದಾರೆ. ಕ್ರೆನಿಕ್‍ನಲ್ಲಿ ಗುರುವಾರ ಇಬ್ಬರು ಅರಬ್ಬರನ್ನು ಅಪರಿಚಿತರು ಕೊಂದು ಹಾಕಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಭಾನುವಾರ ಒಂದೇ ದಿನ ಹಿಂಸಾಚಾರದಿಂದ 168 ಜನರು ಸಾವನ್ನಪ್ಪಿದ್ದಾರೆ ಮತ್ತು 89 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ 17 ಮಕ್ಕಳು ಮತ್ತು 27 ಮಹಿಳೆಯರು ಸೇರಿದ್ದಾರೆ ಎಂದು ಕ್ರೆನಿಕ್ ಪುರಸಭೆ ನಿರ್ದೇಶಕ ನಾಸರ್ ಆಲ್ಜೆನ್ ಹೇಳಿದ್ದಾರೆ.
ಭಾನುವಾರ ನಡೆದ ಕೆಲ ಗಂಟೆಗಳ ಘರ್ಷಣೆಯಲ್ಲಿ ಸರ್ಕಾರಿ ಕಟ್ಟಡ, ಪೊಲೀಸ್ ಠಾಣೆ ಮತ್ತು ಕ್ರೆನಿಕ್‍ನಲ್ಲಿದ್ದ ಏಕೈಕ ಆಸ್ಪತ್ರೆಯನ್ನೂ ಗಲಭೆಕೋರರು ಸುಟ್ಟುಹಾಕಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಜಿನೇನಾ ಆಸ್ಪತ್ರೆ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಎರಡು ಜನಾಂಗಗಳ ನಡುವೆ ನಡೆದ ಈ ದಾಳಿಯನ್ನು ಹತ್ತಿಕ್ಕಲು ಸೇನಾಪಡೆಯನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.