ಸಮಗ್ರ ನ್ಯೂಸ್ : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಮತ್ತೆ ಶುರುವಾಗಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಇಂದಿನಿಂದ ಏಪ್ರಿಲ್ 24 ರವರೆಗೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿಯಲ್ಲಿ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆಯು ಶುಕ್ರವಾರ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಸಾಧಾರಣ ಸುರಿದಿದೆ. ಶುಕ್ರವಾರ ಹಗಲು ವೇಳೆ ಉರಿಬಿಸಿಲು ಎಂದಿಗಿಂತ ತುಸು ಹೆಚ್ಚಿತ್ತು.
ದ.ಕ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಶುಕ್ರವಾರ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮಳೆಯ ಜೊತೆಗೆ ಅಬ್ಬರಿಸಿದ ಗಾಳಿಗೆ ಹಲವೆಡೆ ವಿದ್ಯುತ್ ಕಂಬ ಧರೆಗುರುಳಿದ್ದು, ವಿದ್ಯುತ್ ಕೈಕೊಟ್ಟಿದೆ.