ಶುಂಠಿ ಮತ್ತು ನಿಂಬೆ ಟೀ: ಹೆಚ್ಚಿನ ಜನರಿಗೆ ಬೆಳಿಗ್ಗೆ ಚಹಾ ಕುಡಿಯುವ ಅಭ್ಯಾಸವಿದೆ. ಇದರ ಜೊತೆ ಶುಂಠಿ ಮತ್ತು ನಿಂಬೆ ಮಿಶ್ರಣ ಮಾಡಬೇಕಷ್ಟೇ. ಇದಕ್ಕಾಗಿ ಒಂದು ಕಪ್ ನೀರನ್ನು ಬಿಸಿ ಮಾಡಿ, ನಂತರ ಅದಕ್ಕೆ ಅರ್ಧ ತುಂಡು ನಿಂಬೆ ಮತ್ತು ಸಣ್ಣ ತುಂಡು ಶುಂಠಿ ಹಾಕಿ ಒಂದು ನಿಮಿಷ ಕುದಿಸಿ. ಇದರ ನಂತರ, ಅದನ್ನು ಒಂದು ಕಪ್ನಲ್ಲಿ ಹಾಕಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯಿರಿ. ಇದು ಆರೋಗ್ಯಕ್ಕೆ ಉತ್ತಮ ಪಾನೀಯ.
ಕಿತ್ತಳೆ ರಸ: ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಪಾತ್ರ ಬಹಳ ಮುಖ್ಯ. ಈ ವಿಟಮಿನ್ ಸಿಯನ್ನು ಕಿತ್ತಳೆ ರಸವು ಪೂರೈಸುತ್ತದೆ. ಕಿತ್ತಳೆ ರಸವು ಅನೇಕ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೆಕ್ಟಿನ್ ಎಂಬ ಸಮೃದ್ಧ ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಬಾಳೆಹಣ್ಣನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಉತ್ತಮ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ 6 ಸಮೃದ್ಧವಾಗಿದೆ, ಇದು ರಕ್ತ ಪರಿಚಲನೆ ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ.
ನೆಲ್ಲಿಕಾಯಿ ರಸ: ನೆಲ್ಲಿಕಾಯಿಯನ್ನು ವಿಟಮಿನ್ ಸಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರ ರಸವನ್ನು ಸೇವಿಸುವುದರಿಂದ ದೇಹದ ಪ್ರತಿರಕ್ಷೆಯು ಬಲಗೊಳ್ಳುತ್ತದೆ. ಹಾಗೆಯೇ ನೆಲ್ಲಿಕಾಯಿಯಲ್ಲಿ ಕೆರಾಟಿನ್, ಸತು, ಕಬ್ಬಿಣ, ವಿಟಮಿನ್ ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ ಮುಂತಾದ ಅಂಶಗಳಿವೆ. ಇದು ದೇಹದಲ್ಲಿ ಇರುವ ವಿಷಕಾರಿ ವಸ್ತುಗಳನ್ನು ಸಹ ತೆಗೆದುಹಾಕುವಂತಹ ಕೆಲಸ ಮಾಡುತ್ತದೆ.
ಮಿಕ್ಸ್ ಜ್ಯೂಸ್: ಎರಡು ಕಿತ್ತಳೆ, ಒಂದು ಕ್ಯಾರೆಟ್, 1 ಟೀ ಸ್ಪೂನ್ ಚಿಯಾ ಬೀಜಗಳು, ಮೊಸರು, ಅರ್ಧ ಟೀ ಸ್ಪೂನ್ ಅರಿಶಿನ, ಅರ್ಧ ಟೀಸ್ಪೂನ್ ತುರಿದ ಶುಂಠಿ, ಅರ್ಧ ಟೀ ಸ್ಪೂನ್ ಏಲಕ್ಕಿ, ಅರ್ಧ ಟೀ ಸ್ಪೂನ್ ತೆಂಗಿನ ಎಣ್ಣೆ ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ಜ್ಯೂಸ್ ಮಾಡಿಕೊಳ್ಳಿ. ಬಳಿಕ ಅದನ್ನು ಫಿಲ್ಟರ್ ಮಾಡಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ.
ಹಸಿರು ತರಕಾರಿ ರಸ: ಹಸಿರು ತರಕಾರಿಗಳ ಸೇವನೆಯು ದೇಹಕ್ಕೆ ಅನೇಕ ರೀತಿಯ ಜೀವಸತ್ವಗಳು, ಪ್ರೋಟೀನ್ ಮತ್ತು ಹಲವು ರೀತಿಯ ಖನಿಜಾಂಶಗಳನ್ನು ಒದಗಿಸುತ್ತದೆ. ಹಸಿರು ತರಕಾರಿ ಸೂಪ್ ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತರಕಾರಿಗಳ ಸೂಪ್ ಅಥವಾ ಜ್ಯೂಸ್ ಕುಡಿಯುವುದರಿಂದ ಸಹ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.