ಸಮಗ್ರ ನ್ಯೂಸ್: ಭಾನುವಾರ ತಡರಾತ್ರಿ ಹುಬ್ಬಳ್ಳಿ ನಗರದಲ್ಲಿ ದೊಡ್ಡ ಗಲಭೆಯೇ ನಡೆದು ಹೋಗಿದ್ದು, ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ.
ಧರ್ಮ ಯುದ್ಧದ ಮಧ್ಯೆ ಹುಬ್ಬಳ್ಳಿ ಗಲಾಟೆ ರಾಜ್ಯವನ್ನು ಮತ್ತಷ್ಟು ಅಪಾಯಕಾರಿ ಪರಿಸ್ಥಿತಿಯತ್ತ ತಳ್ಳಿದೆ. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 100ಕ್ಕೂ ಹೆಚ್ಚು ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 88 ಆರೋಪಿಗಳನ್ನು ಬಂಧಿಸಿದ್ದಾರೆ. ಗಲಾಟೆ ಪ್ರಕರಣ ಸಂಬಂಧ ಈವರೆಗೆ 10 ಪ್ರಕರಣ ದಾಖಲಾಗಿವೆ. ಏಪ್ರಿಲ್ 18ರ ಬೆಳಗ್ಗೆ 10.30ಕ್ಕೆ ಪೊಲೀಸರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಪರಾರಿಯಾಗಿರುವ ಮತ್ತಷ್ಟು ಆರೋಪಿಗಳಿಗಾಗಿ 2 ಪೊಲೀಸ್ ತಂಡಗಳಿಂದ ಶೋಧಕಾರ್ಯ ನಡೆಯುತ್ತಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು 8 ತಂಡಗಳನ್ನು ಮಾಡಿ ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮರಾ ದೃಶ್ಯ ಪರಿಶೀಲನೆಗೆ ಒಂದು ತಂಡ ರಚನೆ ಮಾಡಲಾಗಿದ್ದು ಘಟನಾ ಸ್ಥಳದಲ್ಲಿದ್ದ ವಾಹನಗಳ ಬಗ್ಗೆಯೂ ಶೋಧಕಾರ್ಯ ನಡೆಯುತ್ತಿದೆ. ಸೈಬರ್ ಕ್ರೈಂ ತಂಡದಿಂದ ಸಾಮಾಜಿಕ ಜಾಲತಾಣದಲ್ಲಿ ಶೋಧ ನಡೆಯುತ್ತಿದೆ. ವಾಟ್ಸಾಪ್, ಫೇಸ್‌ಬುಕ್, ಇನ್ಸ್‌ಟಾಗ್ರಾಂ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಹುಬ್ಬಳ್ಳಿ ಗಲಾಟೆಯ ಹಿಂದೆ ಮಾಸ್ಟರ್ ಮೈಂಡ್ ಇರುವ ಶಂಕೆ ವ್ಯಕ್ತವಾಗಿದ್ದು ಮಾಸ್ಟರ್ ಮೈಂಡ್ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ಶುರು ಮಾಡಿದ್ದಾರೆ. ವಾಟ್ಸಾಪ್ ಸ್ಟೇಟಸ್ ವಿರುದ್ಧ ಠಾಣೆಗೆ ದೂರು ನೀಡಲು ಬಂದವರು ಠಾಣೆಯ ಬಳಿ ಗಲಾಟೆ ಮಾಡಿದ್ದರು. ಗಲಾಟೆ ಮಾಡುವ ಉದ್ದೇಶದಿಂದಲೇ ಕಲ್ಲು ಸಂಗ್ರಹ ಮಾಡಿದ್ದರು. ಹೀಗಾಗಿ ಇದರ ಹಿಂದೆ ಮಾಸ್ಟರ್ ಮೈಂಡ್ ಇರುವ ಅನುಮಾನ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗೆ ಮೊಬೈಲ್ ಟವರ್ ಲೊಕೇಷನ್, ಆರೋಪಿಗಳ ಕಾಲ್ ಟ್ರೇಸ್ ಮಾಡುಲಾಗುತ್ತಿದೆ. ಗಲಭೆಗೆ ಅಸಲಿ ಕಾರಣವನ್ನು ಪತ್ತೆಹಚ್ಚುಲು ಪೊಲೀಸರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದೇ ಒಂದು ಪೋಸ್ಟ್ಗೆ ಗಲಭೆಯಾಗಿದೆ. ನಿನ್ನೆ(ಏಪ್ರಿಲ್ 17) ಸಂಜೆ 7 ಗಂಟೆ ಸುಮಾರಿಗೆ ಯುವಕನೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಮಾದರಿಯ ಪೋಸ್ಟ್ ಒಂದನ್ನ ಹಾಕ್ಕೊಂಡಿದ್ದ. ಕೆಲವೇ ಕ್ಷಣಗಳಲ್ಲಿ ಸ್ಟೇಟಸ್ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಮುಸ್ಲಿಂ ಸಮುದಾಯದ ಗ್ರೂಪ್ಗಳಲ್ಲಿ ಪೋಸ್ಟ್ ಶೇರ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಕೆರಳಿದ ಉದ್ರಿಕ್ತರು ಮನಬಂದಂತೆ ಕಲ್ಲೆಸೆದು ಹುಬ್ಬಳ್ಳಿಯಲ್ಲಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಹಳೇ ಹುಬ್ಬಳ್ಳಿ ಠಾಣೆ ಬಳಿ ಜಮಾಯಿಸಿ ಕಲ್ಲು ತೂರಾಟ ಆರಂಭಿಸಿದ್ರು. ಬಸ್‌ಗಳ ಮೇಲೂ ಕಲ್ಲು ತೂರಾಡಿದ್ದಾರೆ. ಬಸ್‌ಗಳ ಗಾಜು ಪುಡಿ ಪುಡಿಯಾಗಿದ್ದು, ಪೊಲೀಸರ ವಾಹನದ ಮೇಲೂ ಕಲ್ಲೆಸೆದಿದ್ದಾರೆ. ಉದ್ರಿಕ್ತರ ಪುಂಡಾಟಕ್ಕೆ ಪೊಲೀಸ್ ಜೀಪ್ ಗಳು ಜಖಂ ಆಗಿವೆ.
ಹಳೇ ಹುಬ್ಬಳ್ಳಿಯ ಸಂಜೀವಿನಿ ಆಸ್ಪತ್ರೆ ಮೇಲೂ ಕಲ್ಲು ತೂರಿದ್ದಾರೆ. ಏಕಾಏಕಿ ಆಸ್ಪತ್ರೆ ಬಳಿ ಜಮಾಯಿಸಿ ದಾಳಿ ನಡೆಸಿದ ಕಿಡಿಗೇಡಿಗಳು ಆಸ್ಪತ್ರೆ ಮುಂಭಾಗದ ಕಿಟಕಿ ಗಾಜು ಪುಡಿ ಪುಡಿ ಮಾಡಿದ್ರು. ಹುಬ್ಬಳ್ಳಿ ನಗರದ ಆಂಜನೇಯ ದೇಗುಲದ ಮೇಲೂ ಕಲ್ಲು ತೂರಿದ್ದು ಈ ಪರಿಣಾಮ ದೇವಸ್ಥಾನದ ಕಿಟಕಿ ಗಾಜು ಪುಡಿ ಪುಡಿಯಾಗಿದೆ.