ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಅಬ್ಬರ ಹೆಚ್ಚಾಗಿದೆ.
ಏಪ್ರಿಲ್ 18ರ ತನಕ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದೆ.
ಏಪ್ರಿಲ್ 17, 18ರಂದು ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಮಳೆ ಮುನ್ಸೂಚನೆ ನೀಡಲಾಗಿದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಮತ್ತೆ ಧಾರಾಕಾರ ಮಳೆಯಾಗಿದ್ದು ಶನಿವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಬೆಂಗಳೂರಿನಲ್ಲಿ ಸುರಿದ ಗಾಳಿ ಮಳೆಗೆ ರಸ್ತೆಗೆ ಮರಗಳು ಬಿದ್ದಿದ್ದವು. ಹಾಗೇ ಕೆಲವು ಹೊತ್ತು ವಿದ್ಯುತ್ ವ್ಯತ್ಯಯಗಳಾಗಿತ್ತು.