ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮನೆಗೆ ಸ್ವಾಮೀಜಿಗಳು ಭೇಟಿ ನೀಡಿ, ಮಾಜಿ ಸಚಿವರಿಗೆ ಧೈರ್ಯ ತುಂಬಿದ್ದು, ಈ ಸುದ್ದಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಶಿವಮೊಗ್ಗದಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಗೆ ಕಾಗಿನೆಲೆಯ ಪುರುಷೋತ್ತಮನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ, ಸಹಿತ ಒಟ್ಟು 9 ಸ್ವಾಮೀಜಿಗಳು ಈಶ್ವರಪ್ಪ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಸಂತೋಷ್ ಆತ್ಮಹತ್ಯೆ ಕೇಸ್‌ನಲ್ಲಿ ಈಶ್ವರಪ್ಪ ರಾಜೀನಾಮೆ ಹಿನ್ನೆಲೆ ಈಶ್ವರಪ್ಪಗೆ ಸ್ವಾಮೀಜಿಗಳು ಧೈರ್ಯ ತುಂಬಿದ್ದಾರೆ.
ಅಷ್ಟೇ ಅಲ್ಲದೆ, ಕೆ.ಎಸ್. ಈಶ್ವರಪ್ಪಗೆ ಕರೆ ಮಾಡಿದ ಮಂತ್ರಾಲಯದ ಶ್ರೀಗಳು ನೀವು ಯಾವುದಕ್ಕೂ ವಿಚಲಿತರಾಗಬೇಡಿ, ನೀವು ರಾಮ ಭಕ್ತರು. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.
ಸಂತೋಷ್ ಪ್ರಕರಣದ ಬಗ್ಗೆ ಶ್ರೀಗಳಿಗೆ ಕೆ.ಎಸ್. ಈಶ್ವರಪ್ಪ ವಿವರಣೆ ನೀಡಿದ್ದಾರೆ. ಪಕ್ಷದ ವರಿಷ್ಠರ ಜೊತೆ ಚರ್ಚಿಸಿಯೇ ರಾಜೀನಾಮೆ ನೀಡಿರುವೆ. ಎರಡು ದಿನ ಮೊದಲೇ ರಾಜೀನಾಮೆಯನ್ನ ನೀಡಲು ತೆರಳುತ್ತಿದ್ದೆ. ರಾಜೀನಾಮೆ ನೀಡಲು ಮೈಸೂರಿನಿಂದ ಬೆಂಗಳೂರಿಗೆ ಹೋಗ್ತಿದ್ದೆ. ಆತುರಬೇಡವೆಂಬ ಸೂಚನೆ ಹಿನ್ನೆಲೆ ರಾಜೀನಾಮೆಗೆ ತಡ ಮಾಡಿದ್ದೆ ಎಂದು ಕಾಗಿನೆಲೆ ಶ್ರೀ ಸೇರಿದಂತೆ ವಿವಿಧ ಶ್ರೀಗಳಿಗೆ ಕೆ.ಎಸ್. ಈಶ್ವರಪ್ಪ ವಿವರಣೆ ಕೊಟ್ಟಿದ್ದಾರೆ.
ಇನ್ನೂ ಕೆ ಎಸ್ ಈಶ್ವರಪ್ಪ ವಿರುದ್ಧ ಆಕ್ರೋಶಿತರಾದ ಸಾರ್ವಜನಿಕರು “ನೊಂದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದನ್ನು ನೋಡಿದ್ದೀವಿ, ಕೊಂದವರ ಮನೆಗೆ ಭೇಟಿ ನೀಡಿ ಸಮಾಜಕ್ಕೆ ಯಾವ ಸಂದೇಶ ನೀಡ್ತಿರಾ ಸ್ವಾಮಿಗಳೇ?” ಎಂದು ಸ್ವಾಮಿಗಳ ಭೇಟಿ ನ್ಯೂಸ್ ಗೆ ಈ ಕಾಮೆಂಟ್ ಮಾಡಿರುವುದು ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.