ಸಮಗ್ರ ನ್ಯೂಸ್: ಹಿಂದೂ ಯುವತಿಯೊಂದಿಗೆ ಪರಾರಿಯಾದ ಮುಸ್ಲಿಂ ಯುವಕನ ಕುಟುಂಬಕ್ಕೆ ಸೇರಿದ ಎರಡು ಮನೆಗಳಿಗೆ ಬೆಂಕಿ ಹಚ್ಚಿ ನಾಶ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಆಗ್ರಾದ ರುನಕ್ತಾ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ.
ಇಲ್ಲಿನ ಜಿಮ್ ಒಂದರ ಮಾಲೀಕ ಸಾಜಿದ್ ಅವರ ಮನೆಗೆ ಧರಮ್ ಜಾಗರಣ ಸಮನ್ವಯ್ ಸಂಘದ ಸದಸ್ಯರು ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ. ಪಕ್ಕದಲ್ಲೇ ಇದ್ದ ಮತ್ತೊಂದು ಮನೆಗೂ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂ ಯುವತಿಯನ್ನು ಸಾಜೀದ್ ಅಪಹರಿಸಿದ್ದಾನೆಂದು ಆರೋಪಿಸಲಾಗಿದೆ. ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ. ಬೆಂಕಿ ಹಚ್ಚಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.