ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಸಂಬಂಧಿಸಿ ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಮಂಗಳೂರಿನಲ್ಲಿ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ತಪ್ಪಿತಸ್ಥರ ವಿರುದ್ಧ ಪಕ್ಷ ಮತ್ತು ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲರದು ವಾಟ್ಸ್‌ಆಯಪ್ ಸಂದೇಶ ಇದೆಯೇ ಹೊರತು, ಡೆತ್ ನೋಟ್ ಅಲ್ಲ. ಈ ಎಲ್ಲ ಸಂಗತಿಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಹಿಂದಿನ ಎಲ್ಲ ವಿಚಾರಗಳ ತನಿಖೆ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಗೆ 2-3 ದಿನಗಳು ಬೇಕಾಗಬಹುದು. ನಂತರ ಸತ್ಯಾಸತ್ಯತೆ ತಿಳಿದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಇನ್ನೆಷ್ಟು ಜನರ ತಲೆದಂಡವಾಗಲಿದೆ ಎಂದು ಕಾದುನೋಡಬೇಕಿದೆ.