ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಜಾಬ್, ದೇವಸ್ಥಾನದಲ್ಲಿ ವ್ಯಾಪಾರ ನಿಷೇಧ ಹಾಗೂ ಇತರೆ ಹಲವು ವಿಷಯಗಳಲ್ಲಿ ಹಿಂದೂ- ಮುಸ್ಲಿಂ ನಡುವೆ ಧಾರ್ಮಿಕ ವೈಮನಸ್ಯದ ಸ್ಥಿತಿ ನಿರ್ಮಾಣವಾಗಿದೆ.
ಹಿಂದೂ- ಮುಸ್ಲಿಂ ನಡುವೆ ಹಲವು ವಿವಾದಗಳ ನಡುವೆಯೂ ರಾಜ್ಯದ ಹಲವೆಡೆ ಎರಡೂ ಧರ್ಮಗಳ ಸಾಮರಸ್ಯ ಮತ್ತು ಸಹೋದರತ್ವ ಬಾಂಧವ್ಯ ಮೇಳೈಸಿದೆ.
ಇಂತಹ ಮತ್ತೊಂದು ಸನ್ನಿವೇಶ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದ್ದು, ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ನಡೆಯುವ ಕುರಾನ್ ಪಠಣವೂ ಒಂದಾಗಿದೆ.
ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವವು ನೆರೆದಿದ್ದ ಸಹಸ್ರಾರು ಭಕ್ತರ ವೇದಘೋಷ ಜೈಕಾರದ ನಡುವೆ ಬುಧವಾರ ವಿಜೃಂಭಣೆಯಿಂದ ಜರುಗಿತು.
ಬುಧವಾರ ಬೆಳಿಗ್ಗೆ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಯಾತ್ರಾದಾನ ಸೇವೆಯ ನಂತರ ಶ್ರೀಯವರ ಉತ್ಸವ ಮೂರ್ತಿಯನ್ನು ಅಲಂಕಾರಗೊಂಡ ದಿವ್ಯರಥದಲ್ಲಿ ಕೂರಿಸಲಾಯಿತು.
ಉತ್ಸವ ಮೂರ್ತಿಯನ್ನು ರಾಜಗೌರವದೊಂದಿಗೆ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ರಥದ ಮೇಲೆ ಕರೆತಂದು ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿ ಕೂರಿಸಲಾಯಿತು.
ಚನ್ನಕೇಶವವನ ರಥಾರೋಹಣಕ್ಕೂ ಮೊದಲು ಕೇಸರಿ ಮಂಟಪಕ್ಕೆ ರಥಪ್ರೋಕ್ಷಣೆಯನ್ನು ಮಾಡಲಾಯಿತು. ರಥಕ್ಕೆ ಪೂಜೆಯನ್ನು ಸಲ್ಲಿಸಿದ ನಂತರ ಬಾಳೆಕಂದನ್ನು ಕತ್ತರಿಸಿ ಬಲಿಯನ್ನು ಕೊಡಲಾಯಿತು.
ಹಿಂದಿನ ಸಂಪ್ರದಾಯದಂತೆ ದೊಡ್ಡಮೇದೂರಿನ ಮೌಲ್ವಿ ಖಾಜಿ ಸೈಯ್ಯದ್ ಸಜ್ಜಾದ್‌ಬಾಷ ಖಾದ್ರಿ ರಥದ ಮುಂದೆ ಕುರಾನ್ ಗ್ರಂಥದ ಕೆಲವು ಸಾಲುಗಳನ್ನು ಪಠಣ ಮಾಡಿದ ನಂತರ ಭಕ್ತರ ಘೋಷದ ನಡುವೆ 11 ಗಂಟೆ 20 ನಿಮಿಷಕ್ಕೆ ರಥವನ್ನು ಮೂಲಸ್ಥಾನದಿಂದ ಎಳೆಯಲಾಯಿತು.
ಐದಾರು ತಲೆಮಾರುಗಳಿಂದ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ಮಾಡಲಾಗುತ್ತಿದ್ದು, ಅದರಂತೆ ದೇವರಲ್ಲಿ ಪ್ರಾರ್ಥಿಸಿದ ಖಾದ್ರಿ, ಇಡೀ ಜಗತ್ತು ಶಾಂತಿ, ಪ್ರೀತಿ ಮತ್ತು ನೆಮ್ಮದಿಯಿಂದ ಇರಬೇಕು.
ಸರ್ವಜನಾಂಗದವರು ಸಹೋದರತ್ವದಿಂದ ಬಾಳಬೇಕು. ಎಲ್ಲರಿಗೂ ಒಳಿತನ್ನು ಮಾಡಬೇಕು ಎಂದು ಕೋರಿದರು. ನಂತರ ಖಾದ್ರಿಯವರಿಗೆ ಸಂಪ್ರದಾಯದಂತೆ ದೇಗುಲದ ವತಿಯಿಂದ 25 ಕೆಜಿ ಅಕ್ಕಿ ಮತ್ತು ಗೌರವ ಸಂಭಾವನೆ ನೀಡಲಾಯಿತು.
ಹಿಂದಿನ ವಾಡಿಕೆಯಂತೆ ಗರುಡ ಪಕ್ಷಿಯು ರಥ ಎಳೆಯುವ ಸಂದರ್ಭದಲ್ಲಿ ದೇಗುಲದ ಸುತ್ತ ಪ್ರದಕ್ಷಿಣೆ ಮಾಡಿದ್ದನ್ನು ಕಂಡು ಭಕ್ತರು ಭಕ್ತಿಯಿಂದ ಕೈ ಮುಗಿದರು. ರಥವನ್ನು ಎಳೆಯುವ ಸಂದರ್ಭದಲ್ಲಿ ಭಕ್ತರು ದೇವರಿಗೆ ಬಾಳೆಹಣ್ಣು, ಧವನವನ್ನು ಎಸೆದು ಭಕ್ತಿಭಾವದಿಂದ ಕೇಶವನ ನಾಮಸ್ಮರಣೆ ಮಾಡಿದರು