ಸಮಗ್ರ ನ್ಯೂಸ್: ಏಳು ವರ್ಷಗಳ ಹಿಂದೆ ಸಂಪಾಜೆಯ ಕಡೆಪಾಲ ಎಂಬಲ್ಲಿ ಆಲ್ಟೋ ಕಾರು -ಟಿಪ್ಪರ್ ನಡುವಿನ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಆರೋಪಿ ಟಿಪ್ಪರ್ ಚಾಲಕ ಹಾಗೂ ಮಾಲಕರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
ಪ್ರಕರಣದ ಆರೋಪಿ, ಟಿಪ್ಪರ್ ಚಾಲಕ ಬೆಳ್ತಂಗಡಿ ಮೂಲದ ಇಸ್ಮಾಯಿಲ್ ಹಾಗೂ ಟಿಪ್ಪರ್ ಮಾಲಕ ಮಹಮ್ಮದ್ ರಫೀಕ್ ಎಂಬವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ರೂ. ದಂಡ ವಿಧಿಸಲಾಗಿದೆ. ಎ. 8ರಂದು ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?
2015 ರ ಫೆಬ್ರವರಿ 18 ರಂದು ಸಂಜೆ 5 ಗಂಟೆಯ ವೇಳೆಗೆ ಮರಳು ತುಂಬಿದ ಟಿಪ್ಪರ್ ವಾಹನ ಹಾಗೂ ಆಲ್ಟೋ ಕಾರು ನಡುವೆ ಕಲ್ಲುಗುಂಡಿಯ ಕಡೆಪಾಲ ಸಮೀಪ ಭೀಕರ ಅಪಘಾತ ನಡೆದಿತ್ತು. ಘಟನೆಯಲ್ಲಿ ಪಂಜದ ಲಕ್ಷ್ಮೀನಾರಾಯಣ ಭೀಮಗುಳಿ, ಅವರ ಪುತ್ರ ಅವಿನಾಶ್ ಭೀಮಗುಳಿ ಅವಿನಾಶ್ ಅವರ ತಾಯಿ ಚೆನ್ನಮ್ಮ, ಅವಿನಾಶ್ ಅವರ ಪುತ್ರ ಅಭಿನಂದನ್ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಅವಿನಾಶ್ ಅವರ ಪತ್ನಿ ಭವ್ಯ ರವರಿಗೆ ತಲೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿತ್ತು. ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಅಕ್ರಮ ಮರಳು ಸಾಗಾಟ
ಆಪಾದಿತ ಟಿಪ್ಪರ್ ಚಾಲಕ ಇಸ್ಮಾಯಿಲ್ ಎಂಬಾತ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ. ಈತ ಮಂಗಳೂರು ಮೂಲದ ಮಹಮ್ಮದ್ ರಫೀಕ್ ಎಂಬಾತನ ಕೆ ಎ 19 ಡಿ 193 ಟಿಪ್ಪರ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮಂಗಳೂರಿನ ಅಡ್ಯಾರು ನದಿ ದಡದಲ್ಲಿ ಶೇಖರಿಸಿಟ್ಟಿದ್ದ ಹೊಯ್ಗೆ ಯನ್ನು ಕಳವು ಮಾಡಿಕೊಂಡು ಮಾಣಿ-ಮೈಸೂರು ಹೆದ್ದಾರಿ ಮೂಲಕ ಮಡಿಕೇರಿಗೆ ಹೋಗುತ್ತಿತ್ತು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.
ನ್ಯಾಯಾಲಯದಲ್ಲಿ ಆರೋಪಿಗಳ ಪರವಾಗಿ ನ್ಯಾಯವಾದಿ ಎಂ. ವೆಂಕಪ್ಪ ಗೌಡ ಹಾಗೂ ದೂರುದಾರರ ಪರವಾಗಿ ಸರ್ಕಾರಿ ವಕೀಲರು ವಾದಿಸಿದ್ದರು.