ಸಮಗ್ರ ನ್ಯೂಸ್: ಸವದತ್ತಿ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ ಆಕ್ಸಿಜನ್ ಖಾಲಿಯಾಗಿ ಬಾಣಂತಿ ಸಾವನ್ನಪ್ಪಿದ್ದು, ಸಮಗ್ರ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸವದತ್ತಿ ಪಟ್ಟಣದ ನಿವಾಸಿ ವಿದ್ಯಶ್ರೀ ಸುರೇಶ ಬೆಂಚಿಗೇರಿ (25) ಸಾವನ್ನಪ್ಪಿದ ಬಾಣಂತಿ. ವಿದ್ಯಶ್ರೀ ಏಪ್ರಿಲ್ 04 ರಂದು ಸದವತ್ತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆ ಮತ್ತು ಮಗುವಿಗೆ ಯಾವುದೇ ತೊಂದರೆ ಆಗಬಾರದು ಎಂದು ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆಯನ್ನೂ ಮಾಡಿಸಿದ್ದರು. ಚೊಚ್ಚಲ ಮಗುವಿಗೆ ಜನ್ಮವಿತ್ತ ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದರು. ಆದರೆ ಎ.8ರಂದು ಇದ್ದಕ್ಕಿದ್ದಂತೆ ಬಾಣಂತಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ತಕ್ಷಣ ಆರೈಕೆ ಮಾಡಿದ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಸೂಚಿಸಿದ್ದಾರೆ. ಆದರೆ, ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್‌ನಲ್ಲಿದ್ದ ಸಿಲಿಂಡರ್‌ನಲ್ಲಿ ಆಕ್ಸಿಜನ್ ಖಾಲಿ ಆಗಿದ್ದು ಮಹಿಳೆ 30 ಕಿ.ಮಿ. ದೂರ ಹೋಗುವಷ್ಟರಲ್ಲೇ ಕೊನೆಯುಸಿರೆಳೆದರು.
ಈ ಘಟನೆ ಸಂಬಂಧ ಮೃತಳ ತಂದೆ ಶ್ರೀಶೈಲ ಬಸಪ್ಪ ದಿನ್ನಿಮನಿ ಹಾಗೂ ಸಹೋದರ ಬಸವರಾಜ ದಿನ್ನಿಮನಿ ಪ್ರತಿಕ್ರಿಯಿಸಿ, ‘ಈ ಪರಿಸ್ಥಿತಿ ಯಾರಿಗೂ ಬರಬಾರದು. ಈ ಕುರಿತು ಸೂಕ್ತ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.