ಸಮಗ್ರ ನ್ಯೂಸ್: ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಸ್ಥಳೀಯ ಭಾಷೆಗಳನ್ನು ಮೂಲೆಗೆ ತಳ್ಳುವ ಆತಂಕ ಎದುರಾಗಿದೆ. ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಿತ್ ಶಾ ಸರ್ಕಾರ ನಡೆಸುವ ಮಾಧ್ಯಮವೇ ಅಧಿಕೃತ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ.
ಇದು ಖಂಡಿತವಾಗಿಯೂ ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೀಗ ಸಚಿವ ಸಂಪುಟದ ಶೇ.70ರಷ್ಟು ಕಾರ್ಯಸೂಚಿ ಹಿಂದಿಯಲ್ಲಿ ಸಿದ್ಧವಾಗಿದೆ ಎಂದು ಅವರು ಸದಸ್ಯರಿಗೆ ತಿಳಿಸಿದರು.
ಅಧಿಕೃತ ಭಾಷೆ ಹಿಂದಿಯನ್ನು ದೇಶದ ಏಕತೆಯ ಪ್ರಮುಖ ಭಾಗವನ್ನಾಗಿ ಮಾಡುವ ಸಮಯ ಇದೀಗ ಬಂದಿದೆ. ಹಿಂದಿಯನ್ನು ಇಂಗ್ಲಿಷ್ ಗೆ ಪರ್ಯಾಯವಾಗಿ ಸ್ವೀಕರಿಸಬೇಕೆ ಹೊರತು ಸ್ಥಳೀಯ ಭಾಷೆಗಳಿಗೆ ಅಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೇರೆ ಸ್ಥಳೀಯ ಭಾಷೆಗಳ ಪದಗಳನ್ನು ಸ್ವೀಕರಿಸಿ ಹಿಂದಿಯನ್ನು ಹೊಂದಿಕೊಳ್ಳುವಂತೆ ಮಾಡಬೇಕೆ ಹೊರತು ಪ್ರಚಾರ ಮಾಡುವುದಲ್ಲ. ವಿವಿಧ ಭಾಷೆಗಳನ್ನು ಮಾತನಾಡುವ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸಿದಾಗ ಅದು ಭಾರತದ ಭಾಷೆಯಲ್ಲಿ ಇರಬೇಕು ಎಂದು ಗೃಹ ಸಚಿವರು ಹೇಳಿದ್ದಾರೆ.
ಇದರಿಂದಾಗಿ ರಾಷ್ಟ್ರವ್ಯಾಪಿ ಹಿಂದಿ ಹೇರಿಕೆಗೆ ಮತ್ತೊಂದು ಹೆಜ್ಜೆ ಮುಂದಿರಿಸಲಾಗಿದೆ. ಇಂಗ್ಲಿಷ್ ಗೆ ಪರ್ಯಾಯವಾಗಿ ಇದುವರೆಗೆ ಪ್ರಾದೇಶಿಕ ಭಾಷೆಗಳನ್ನು ಬಳಸಿಕೊಳ್ಳಲಾಗಿತ್ತು. ಇದರಿಂದ ಸ್ಥಳೀಯ ಭಾಷೆಗಳಿಗೆ ತಕ್ಕಮಟ್ಟಿನ ಮಾನ್ಯತೆ ಸಿಗುತ್ತಿತ್ತು. ಆದರೆ ಕೇಂದ್ರದ ಈ ನಿರ್ಧಾರ ಸ್ಥಳೀಯ ಭಾಷೆಗಳನ್ನು ಕಡೆಗಣಿಸುವಂತೆ ಮಾಡಿದೆ.