ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಈ ವೇಳೆ ಸಂವಾದ ನಡೆಸಿದ ಅವರು ‘ಡಿಸಿಗಳು ಕೊರೊನ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದರೆ ರೋಗದಿಂದ ಬೇಗ ಮುಕ್ತರಾಗಬಹುದು’ ಎಂದಿದ್ದಾರೆ. ಈ ಮೂಲಕ ಆಡಳಿತದ ಪೂರ್ಣ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳೇ ವಹಿಸಿಕೊಳ್ಳಬೇಕು ಎಂಬುದನ್ನು ಪರೋಕ್ಷವಾಗಿ ಸೂಚಿಸಿದಂತಿತ್ತು. ಕೊರೊನ ನಿಯಂತ್ರಣದಲ್ಲಿ ಜಿಲ್ಲಾಧಿಕಾರಿಗಳ ಪಾತ್ರವೇ ಬಹುಮುಖ್ಯ ಎಂದು ಅವರು ನುಡಿದರು. ಹಾಗಾದರೆ ಶಾಸಕಾಂಗದ ಕಾರ್ಯ ಏನೂ ಇಲ್ಲವೇ? ಎಂಬುದು ಈಗಿನ ಚರ್ಚಾ ವಿಷಯ.
ಪ್ರಧಾನಿಗಳು ಹೇಳಿದಂತೆ ಜಿಲ್ಲಾ ಹೊಣೆಗಾರಿಕೆ ಆಯಾ ಜಿಲ್ಲಾಧಿಕಾರಿಗಳದ್ದೇ. ಹಾಗಿದ್ದರೂ ಪ್ರತೀ ಜಿಲ್ಲೆಗಳಲ್ಲಿ, ಸಂಸದರು, ಶಾಸಕರು, ಸ್ಥಳೀಯಾಡಳಿದ ಪ್ರತಿನಿಧಿಗಳು, ಕೆಲವೆಡೆ ರಾಜ್ಯ,ಕೇಂದ್ರ ಸಚಿವರೂ ಇದ್ದಾರೆ. ಇಂದು ನಡೆದ ಕಾನ್ಫರೆನ್ಸ್ ಸಭೆಯಲ್ಲಿ ಈ ಎಲ್ಲಾ ಜನಪ್ರತಿನಿಧಿಗಳೂ ಭಾಗವಹಿಸಿದ್ದರು. ಅವರಾರಿಗೂ ಹೊಣೆಗಾರಿಕೆ, ಜವಾಬ್ದಾರಿ ವಹಿಸದೇ ನೇರವಾಗಿ ಜಿಲ್ಲಾಧಿಕಾರಿಗಳ ಮೇಲೆ ಕೊರೊನ ನಿರ್ವಹಣೆ ಮಾಡಲು ಜವಾಬ್ದಾರಿ ನೀಡಿರುವುದು ಪ್ರಧಾನಿಗಳು ಬ್ಯುರೋಕ್ರೆಸಿ ಕೈಗೆ ಕೊಟ್ಟಂತೆ ಕಂಡುಬಂದಿದೆ.
ಈ ಮಂತ್ರಿ ಮಹೋದಯರನ್ನು ನಂಬಿ ಏನೂ ಆಗದು, ಏನಿದ್ದರೂ ಫೀಲ್ಡ್ ಕಮಾಂಡರ್ ಗಳು ನೀವೇ.
ನಿಮಗೇನಾದರೂ ಸಮಸ್ಯೆ ಆದಲ್ಲಿ, ಅಥವಾ ಇನ್ನೇನಾದರೂ ಅವಶ್ಯಕತೆ ಬೇಕಿದ್ದಲ್ಲಿ ನನ್ನನ್ನೇ ಕೇಳಿ ಎಂಬಂತಿತ್ತು ಪ್ರಧಾನಿಯವರ ಮಾತು.
ಒಂದೆಡೆ ಮಾತನಾಡಿದ ಪ್ರಧಾನಿಗಳು ‘ ನಿಮಗೆ ನಿಯಮಗಳಲ್ಲಿ ಬದಲಾವಣೆ ಅಥವಾ ಅವಶ್ಯಕತೆ ಕಂಡುಬಂದಲ್ಲಿ ಯಾವುದೇ ಅಂಜಿಕೆ ಇಲ್ಲದೆ ನನಗೆ ತಿಳಿಸಿ’ ಎಂದಿದ್ದಾರೆ. ಈ ಮಾತಿನಿಂದ ಜಿಲ್ಲಾಧಿಕಾರಿಗಳಿಗೆ ಹೊಸ ಸಂಚಲನ ಮೂಡಿದಂತಾದರೂ ನಾವು ಆಯ್ಕೆಮಾಡಿದ ಜನಪ್ರತಿನಿಧಿಗಳು ಕೈಲಾಗದವರು ಎಂಬ ಅಭಿಪ್ರಾಯ ದೇಶವಾಸಿಗಳಲ್ಲಿ ಮೂಡಿರುವುದು ಸ್ಪಷ್ಟ.