ಸಮಗ್ರ ನ್ಯೂಸ್: ತಾಲೂಕು ವಕೀಲರ ಸಂಘದ ಚುನಾವಣೆ ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದು, ನೂತನ ಸಮಿತಿ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಎ 6 ರಂದು ನಡೆಯಲಿತ್ತು. ಆದರೆ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ವಿನಯ ಮುಳುಗಾಡುರವರ ಆಯ್ಕೆ ಸಂಘದ ಬೈಲಾಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ನ್ಯಾಯವಾದಿ ಶ್ರೀಪಾದ ಹೆಗಡೆ ಸಂಘಕ್ಕೆ ಪತ್ರವನ್ನು ಬರೆದಿದ್ದು ಭಿನ್ನಮತ ಸ್ಪೋಟಗೊಂಡಂತಾಗಿದೆ.
ಸಂಘದ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಲು ಸಂಘದ ಸದಸ್ಯರಾಗಿ ಎಂಟು ವರ್ಷಗಳಾಗಿರಬೇಕು. ಆದರೆ ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ನ್ಯಾಯವಾದಿ ವಿನಯ ಮುಳುಗಾಡುರವರು ಎಂಟು ವರ್ಷ ಪೂರ್ತಿಯಾಗದೆ ಅವರ ದಾಖಲೆ ಪತ್ರಗಳನ್ನು ತಿದ್ದಿ ಸಂಘದ ನಿಯಮವನ್ನು ಉಲ್ಲಂಘಿಸಿ ರುತ್ತಾರೆ. ಕಳೆದ ಹದಿನೈದು ವರ್ಷಗಳಿಂದ ಸಮಿತಿ ಸದಸ್ಯನಾಗಿ ಇದ್ದು ನನಗೆ ಅನ್ಯಾಯವಾಗಿದೆ. ನ್ಯಾಯ ಒದಗಿಸಿ ಕೊಡುವಂತೆ ಪತ್ರದಲ್ಲಿ ಶ್ರೀಪಾದ ಹೆಗಡೆ ಬರೆದಿದ್ದರು.
ಈ ಪತ್ರದ ಆಧಾರದಲ್ಲಿ ಇಂದು ಸಂಘದ ಅಧ್ಯಕ್ಷ ವೆಂಕಪ್ಪ ಗೌಡ ರವರ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದು ಶ್ರೀಪಾದ ಹೆಗಡೆ ಯವರು ನೀಡಿರುವ ಪತ್ರ ಸರಿಯಾಗಿದ್ದು ವಿನಯ ಮುಳುಗಾಡು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ತೀರ್ಮಾನವಾಯಿತೆನ್ನಲಾಗಿದೆ. ಬಳಿಕ ವೆಂಕಪ್ಪ ಗೌಡರು ಸಭಾಂಗಣದ ಬಾಗಿಲು ಮತ್ತು ಅಧ್ಯಕ್ಷರ ಕಚೇರಿಯ ಬಾಗಿಲಿಗೆ ಬೀಗ ಜಡಿದು ಸಭೆಯಿಂದ ಹೊರ ಬಂದರು.
ಈ ಸಂದರ್ಭದಲ್ಲಿ ವಕೀಲರುಗಳು ಎರಡು ತಂಡಗಳಾಗಿ ವಾಗ್ವಾದದಲ್ಲಿ ತೊಡಗಿದ್ದು, ನ್ಯಾಯಾಲಯದಲ್ಲಿದ್ದ ನ್ಯಾಯಾಧೀಶರು ಮಧ್ಯಪ್ರವೇಶಿಸಿ ಸಮಧಾನಿಸಿದರೆಂದೂ ತಿಳಿದುಬಂದಿದೆ. ಒಟ್ಟಾರೆ ನ್ಯಾಯಕ್ಕಾಗಿ ವಾದಿಸುವ ನ್ಯಾಯವಾದಿಗಳೇ ಪರಸ್ಪರ ಕಿತ್ತಾಡಿಕೊಳ್ಳುತ್ತಿರುವುದು ವಿಪರ್ಯಾಸ.