ಸಮಗ್ರ ನ್ಯೂಸ್: ಬಿಜೆಪಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯ ಬಳಿಕ, ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಬದಲಾವಣಾ ಪ್ರಕ್ರಿಯೆಗಳು ಚುರುಕುಗೊಂಡಿವೆ. ಜೊತೆ ಜೊತೆಗೆ ಸಿಎಂ ಬೊಮ್ಮಾಯಿ ಸಚಿವ ಸಂಪುಟ ಪುನಾರಚನೆಯೂ ಚುರುಕು ಪಡೆದಿದೆ.
ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚೆ ನಡೆಸುವ ಅಧಿಕೃತ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಇಂದು ಮಧ್ಯಾಹ್ನವೇ ಸಿಎಂ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ರಾಜ್ಯ ಸಚಿವ ಸಂಪುಟ ಕಸರತ್ತಿಗೆ ವರಿಷ್ಠರ ಹಸಿರು ನಿಶಾನೆ ಪಡೆಯುವುದು ಎಂದು ತಿಳಿದುಬಂದಿದೆ.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟಕ್ಕೆ ಸರ್ಜರಿ ಮಾಡುಉವ ಉದ್ದೇಶವನ್ನು ಸಿಎಂ ಬೊಮ್ಮಾಯಿ ಹೊಂದಿದ್ದಾರೆ. ಸದ್ಯ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ನಾಲ್ಕರಿಂದ ಆರು ಮಂದಿ ಹಾಲಿ ಸಚಿವರನ್ನು ಕೈಬಿಡುವ ಮೂಲಕ ಹೆಚ್ಚೂ ಕಡಿಮೆ ಹತ್ತು ಮಂದಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಸಂಪುಟದಲ್ಲಿ ಹೆಚ್ಚೇನೂ ಆ್ಯಕ್ಟಿವ್ ಇಲ್ಲದ ಸಚಿವರನ್ನು ಕೈ ಬಿಟ್ಟು ಹೊಸಬರನ್ನು ಸೇರಿಸಿಕೊಳ್ಳುವ ಕುರಿತು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ಹೈಕಮಾಂಡ್ ಒಪ್ಪಿಗೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಬೊಮ್ಮಾಯಿಯವರ ಲಿಸ್ಟ್ ಗೆ ರಾಷ್ಟ್ರೀಯ ವರಿಷ್ಠರು ಅಂಕಿತ ಹಾಕಿದಲ್ಲಿ ಸದ್ಯದಲ್ಲೇ ಸಂಪುಟದ ಪುನರ್ ರಚನೆಯಾಗುವ ಸಾಧ್ಯತೆಯಿದೆ.