ಸಮಗ್ರ ನ್ಯೂಸ್: ಉದ್ಯಮಿಗಳು, ಶ್ರೀಮಂತರು ಸೇರಿದಂತೆ ಹಲವರು ತಮ್ಮ ಆಸ್ತಿಗಳನ್ನು ಬಡವರಿಗೆ ದಾನ ಮಾಡಿದ ಹಲವು ಉದಾಹರಣೆಗಳನ್ನು ನಾವು ಕಂಡಿದ್ದೇವೆ. ದೇವಸ್ಥಾನ, ಪ್ರಾರ್ಥನಾ ಮಂದಿರಗಳಿಗೂ ದಾನ ನೀಡಿದ್ದನ್ನು ನಾವು ನೋಡಿರುತ್ತೇವೆ. ಆದರೆ ಕೋಟಿ ಕೋಟಿ ಆಸ್ತಿ ಹೊಂದಿರುವ ರಾಜಕಾರಣಿಗೆ ಆಸ್ತಿಗಳನ್ನು ವರ್ಗಾಯಿಸಿದ ಘಟನೆ ಇದುವರೆಗೆ ಗೊತ್ತಿಲ್ಲ. 78ರ ಹರೆಯದ ವೃದ್ಧೆ ಪುಷ್ಪಾ ಮುಂಜಿಯಲ್ ತನ್ನ ಎಲ್ಲಾ ಆಸ್ತಿಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ್ದು, ಇದೀಗ ಸುದ್ದಿಯಾಗಿದೆ. ರಾಹುಲ್ ಗಾಂಧಿ ಸೇವೆ ಈ ದೇಶಕ್ಕೆ ಅವಶ್ಯಕತೆ ಇದೆ ಎಂದು ಪುಷ್ಪಾ ಹೇಳಿದ್ದು, ತನ್ನೆಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿಗೆ ವರ್ಗಾಯಿಸಿದ್ದಾರೆ.
ಉತ್ತರಖಂಡದ ಡೆಹ್ರಾಡೂನ್ ನಿವಾಸಿಯಾಗಿರುವ ಪುಷ್ಪಾ ಮುಂಜಿಯಲ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯಿಂದ ಪ್ರಭಾವಿತರಾಗಿದ್ದಾರೆ. ರಾಹುಲ್ ಗಾಂಧಿಯ ವಿಚಾರಧಾರೆಗಳು ಈ ದೇಶದ ಪ್ರಗತಿಗೆ ಅವಶ್ಯಕವಾಗಿದೆ. ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ರಾಹುಲ್ ಗಾಂಧಿಗೆ ಸಾಧ್ಯವಿದೆ. ಹೀಗಾಗಿ ತನ್ನ ಆಸ್ತಿಗಳನ್ನೆಲ್ಲಾ ಮರಣ ನಂತರ ರಾಹುಲ್ ಗಾಂಧಿಗೆ ಸೇರಬೇಕು ಎಂದು ಮರಣಶಾಸನ ಬರೆಸಿದ್ದಾರೆ.
50 ಲಕ್ಷ ರೂಪಾಯಿ ಮೌಲ್ಯದ ಆಸ್ತಿ, 10 ತೊಲೆ ಬಂಗಾರ ಸೇರಿದಂತೆ ಒಟ್ಟು ಕೋಟಿ ರೂಪಾಯಿಗೆ ಬೆಲೆ ಬಾಳುವ ಆಸ್ತಿಗಳನ್ನು ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ್ದಾರೆ. ಡೆಹ್ರಾಡೂನ್ ಕೋರ್ಟ್ಗೆ ಮರಣಶಾಸನದ ಪತ್ರವನ್ನು ನೀಡಿದ್ದಾರೆ. ಈ ಕುರಿತು ಕಾಂಗ್ರೆಸ್ ಮೆಟ್ರೋಪೊಲಿಟಿಯನ್ ಅಧ್ಯಕ್ಷ ಲಾಲ್ಚಂದ್ ಶರ್ಮಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.