ಸಮಗ್ರ ನ್ಯೂಸ್: ಷರತ್ತು ಪೂರೈಸದೇ ಬಾಕಿ ಉಳಿದಿರುವ 13,000 ರೈತರ ಸಹಕಾರ ಸಾಲಮನ್ನಾ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ. 2017-18ನೇ ಸಾಲಿನ ಬಾಕಿ ಇದ್ದ ಸಹಕಾರ ಸಂಘದಿಂದ ಪಡೆದ ಅಲ್ಪಾವಧಿ ಸಾಲಮನ್ನಾ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಒಂದು ಲಕ್ಷ ರೂ. ಸಾಲಮನ್ನಾ ಮಾಡಲು 14.8.2018ರಲ್ಲಿ ಆದೇಶ ಹೊರಡಿಸಲಾಗಿತ್ತು. ಅದರಂತೆ 20.38 ಲಕ್ಷ ರೈತರಿಗೆ 9,448.62 ಕೋಟಿ ರೂ. ಸಾಲಮನ್ನಾ ಮಾಡುವ ಅಂದಾಜು ಮಾಡಲಾಗಿತ್ತು. 18.95 ಲಕ್ಷ ರೈತರ ಸ್ವಯಂ ದೃಢೀಕರಣ ಪತ್ರ ಪಡೆಯಲಾಗಿದೆ. ಇದರಲ್ಲಿ 17.37 ಲಕ್ಷ ರೈತರಿಗೆ 8,154.98 ಕೋಟಿ ರೂ. ರೈತರ ಸಾಲಮನ್ನಾ ಮಾಡಲು ಹಸಿರು ಪಟ್ಟಿ ತಯಾರಿಸಲಾಗಿದೆ. 2018-19ರಲ್ಲಿ 5.57 ಲಕ್ಷ ರೈತರಿಗೆ 2,600 ಕೋಟಿ ಸಾಲಮನ್ನಾ ಮಾಡಲಾಗಿದೆ ಎಂದು ವಿವರಿಸಿದರು.
2019-20ರಲ್ಲಿ 10.91 ಲಕ್ಷ ರೈತರಿಗೆ 5,092. 33 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. 2020-21ರಲ್ಲಿ 58 ಸಾವಿರ ರೈತರಿಗೆ 295.14 ಕೋಟಿ ಸಾಲಮನ್ನಾವಾಗಿದೆ. ಒಟ್ಟು 7,987.47 ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ. 31 ಸಾವಿರ ರೈತರಿಗೆ 167.51 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 13,500 ಸಾವಿರ ರೈತರ ಅರ್ಹತೆ ಗುರುತಿಸುವುದು ಬಾಕಿ ಇದೆ. ಅದರ ಗ್ರೀನ್ ಲೀಸ್ಟ್ ಬಂದ ಬಳಿಕ ಅವರ ಸಾಲ ಮನ್ನಾ ಮಾಡಲಾಗುತ್ತದೆ ಎಂದರು.