ಸಮಗ್ರ ನ್ಯೂಸ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎಲ್ಲಾ ಶಾಸಕರಿಗೆ ಕೇವಲ ಒಂದು ಪಿಂಚಣಿ ಮಾತ್ರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಶಾಸಕರ ಕುಟುಂಬ ಪಿಂಚಣಿಯನ್ನೂ ಕೂಡಾ ಕಡಿತಗೊಳಿಸಿದ್ದು, ಎಷ್ಟು ಬಾರಿ ಗೆದ್ದರೂ ಕೂಡಾ ಒಂದೇ ಪಿಂಚಣಿ ಎಂದು ಕೂಡಾ ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಈ ವಿಚಾರ ತಿಳಿಸಿದ ಸಿಎಂ ಭಗವಂತ್‌ಮಾನ್ ಹಲವು ಶಾಸಕರು ವಿಧಾನಸಭೆಯಲ್ಲಿ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುವ ಪ್ರತಿ ಅವಧಿಗೆ ಬಹು ಪಿಂಚಣಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಎಷ್ಟು ಬಾರಿ ಆಯ್ಕೆಯಾದರೂ ಒಂದೇ ಪಿಂಚಣಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದರು.
“ಒಬ್ಬ ಶಾಸಕರಿಗೆ ಒಂದು ಪಿಂಚಣಿ” ಎಂಬ ಬೇಡಿಕೆಯನ್ನು ಆಮ್ ಆದ್ಮಿ ಪಕ್ಷವು (ಎಎಪಿ) ಕಳೆದ ವಿಧಾನಸಭೆಯಲ್ಲಿ ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಕೂಡ ಮಾಡಿತ್ತು. ಒಂದು ಅಧಿಕಾರವಧಿಯಲ್ಲಿ ಶಾಸಕರು ಸುಮಾರು 75,150 ಪಿಂಚಣಿ ರೂಪದಲ್ಲಿ ಪಡೆಯುತ್ತಾರೆ. ಶಾಸಕರು ಸೇವೆ ಸಲ್ಲಿಸುವ ಪ್ರತಿ ಅವಧಿಯ ಬಳಿಕ ಪಂಜಾಬ್‌ನ ಶಾಸಕರಿಗೆ ಪಿಂಚಣಿ ಮೊತ್ತದ ಹೆಚ್ಚುವರಿ 66 ಪ್ರತಿಶತವನ್ನು ನೀಡಲಾಗುತ್ತದೆ.
ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ಐದು ಬಾರಿ ಶಾಸಕರಾಗಿರುವ ಮಾಜಿ ಸಿಎಂ ರಾಜಿಂದರ್ ಕೌರ್ ಭಟ್ಟಾಲ್ ಅವರು ತಿಂಗಳಿಗೆ ರೂ 3,23,145 ಪಿಂಚಣಿ ಪಡೆಯುತ್ತಾರೆ. (ಒಂದು ಅವಧಿಗೆ ರೂ 75,150 ಮತ್ತು ಪ್ರತಿ ಅವಧಿಯ ನಂತರ ಶೇ 66ಹೆಚ್ಚಳ). ಅದೇ ರೀತಿ, ಕಾಂಗ್ರೆಸ್ ನಾಯಕ ಲಾಲ್ ಸಿಂಗ್ ಮತ್ತು ಮಾಜಿ ಸಚಿವ ಸರ್ವಾನ್ ಸಿಂಗ್ ಫಿಲ್ಲೌರ್ ತಿಂಗಳಿಗೆ 3.23 ಲಕ್ಷ ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯುತ್ತಾರೆ.