ಸಮಗ್ರ ನ್ಯೂಸ್: ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್ . ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.
2022ರ ಫೆಬ್ರವರಿ 3ರಂದು ಪಬ್ಲಿಕ್ ಟಿವಿ ಯಲ್ಲಿ ” ವಿದ್ಯಾದೇಗುಲದಲ್ಲಿ ಧರ್ಮ ಯುದ್ದ” “ಬಿಗ್ ಬುಲೆಟಿನ್” ಎಂಬ ಹೆಸರಿನ ಕಾರ್ಯಕ್ರಮ ಪ್ರಸಾರವಾಗಿತ್ತು. ವಾಹಿನಿಯ ಮುಖ್ಯಸ್ಥ ಎಚ್ ಆರ್. ರಂಗನಾಥ ಮತ್ತು ನಿರೂಪಕ ಅರುಣ್ ಬಡಿಗರ್ ಮಾತನಾಡುತ್ತಾ ” ಇದು ಭಾರತ. ಭಾರತ ಸೃಷ್ಟಿಯಾಗಿದ್ದೇ ಹಿಂದೂ ರಾಷ್ಟ್ರದ ಆಧಾರದಲ್ಲಿ ” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಮೂಲಕ ಅವರು ಮುಸ್ಲಿಮರ ಭಾವನೆಗೆ ಧಕ್ಕೆ ತಂದಿರುವುದು ಮಾತ್ರವಲ್ಲ ಸಮಾಜದಲ್ಲಿ ಎರಡು ಸಮುದಾಯಗಳ ನಡುವೆ ವೈಷಮ್ಯ ಮೂಡಿಸಲು ಪ್ರಯತ್ನಿಸಿದ್ದಾರೆ. ದೇಶದ ಸಮಗ್ರತೆಯ ವಿರುದ್ಧ ಪೂರ್ವಗ್ರಹ ಪೀಡಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದರ ವಿರುದ್ಧ ಬಂದೇನವಾಜ್ ಗೋಗಿ ಅವರು ಶಹಾಪುರದ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ದೂರುದಾರರ ಪರ ವಕೀಲರಾದ ಮುಹಮ್ಮದ್ ಗೌಸ್ ಗೋಗಿ ಅವರ ವಾದವನ್ನು ಪರಿಗಣಿಸಿ ನ್ಯಾಯಾಲಯವು ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ರಂಗನಾಥ ಮತ್ತು ನಿರೂಪಕ ಅರುಣ್ ಬಡಿಗೇರ ವಿರುದ್ದ ಗೋಗಿ ಪೊಲೀಸ್ ಠಾಣೆಯಲ್ಲಿ ಕಲಂ 153(ಬಿ)505(1)(ಬಿ)(ಸಿ) ಮತ್ತು 505(2) ಐಪಿಸಿ ಅಡಿಯಲ್ಲಿ ಪ್ರಥಮ ವರ್ತಮಾನ ವರದಿ-ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡಿದೆ.