ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ರೂಪಗೊಳ್ಳಲಿರುವ ‘ಅಸನಿ’ ಚಂಡಮಾರುತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಳೆ, ಗಾಳಿ, ಸಿಡಿಲಿನ ಅಬ್ಬರಕ್ಕೆ ಮೂವರು ಮೃತಪಟ್ಟಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಸಹ ಏರಿಕೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಸೋಮವಾರದಿಂದ ‘ಅಸನಿ’ ಚಂಡಮಾರತು ತೀವ್ರ ಸ್ವರೂಪ ಪಡೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಇದರ ಪರಿಣಾಮದಿಂದ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.
ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಮಾತನಾಡಿ, “ಚಂಡಮಾರುತದ ಪರಿಣಾಮ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಳೆಯಾಗಲಿದೆ. ಚಂಡಮಾರುತ ಅಂಡಮಾನ್ ನಿಕೋಬಾರ್ ಪೂರ್ವಭಾಗದಿಂದ ಆರಂಭವಾಗಿ ಬಾಂಗ್ಲಾದೇಶ ಮತ್ತು ಮಯನ್ಮಾರ್ ಉತ್ತರ ಕರಾವಳಿಯತ್ತ ಚಲಿಸಲಿದೆ” ಎಂದು ಹೇಳಿದ್ದಾರೆ.