ಸಮಗ್ರ ನ್ಯೂಸ್: ಕರಾವಳಿ ನಗರಿ ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಮಾಣಿ- ಪುತ್ತೂರು-ಸಂಪಾಜೆ -ಮಡಿಕೇರಿ ಈಗಿರುವ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಂಗಳವಾರ ಆದೇಶ ನೀಡಿದ್ದಾರೆ.
ಸಚಿವರನ್ನು ಭೇಟಿ ಮಾಡಿದ ಸಂಸದ ಹಾಗೂ ರಾಜ್ಯ ಬಿಜೆಪಿ ಅದ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದ ತಂಡದ ಬೇಡಿಕೆ ಸ್ಪಂದಿಸಿದ ಸಚಿವರಿಗೆ ಈಗಿರುವ ಈ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು ಸಾಕಷ್ಟು ಅಪಘಾತಗಳು ಸಂಭವಿಸುತ್ತಿರುವ ಕುರಿತು ಮನವರಿಕೆ ಮಾಡಿ ಕೊಡಲಾಯಿತು. ಈಗಿರುವ ಹಾಲಿ ಹೆದ್ದಾರಿಯಲ್ಲಿ (ಎನ್‌ಹೆಚ್ 275) ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಭಾಗದಲ್ಲಿ ಎರಡು ಪಥಗಳ ರಸ್ತೆ ಮಾತ್ರ ಇದ್ದು ಪದೇ ಪದೇ ಅಪಘಾತಗಳು ಸಂಬವಿಸುತ್ತಿವೆ. ಮಾಣಿಯಿಂದ ಮಡಿಕೇರಿಯವರೆಗೆ ಸುಮಾರು ನೂರು ಕಿಲೋಮೀಟರ್ ಗಳಷ್ಟು ದೂರದ ಹೆದ್ದಾರಿಯಲ್ಲಿ ಮೊದಲು ಮಾಣಿಯಿಂದ ಸಂಪಾಜೆವರೆಗಿನ ರಸ್ತೆಯನ್ನು ಚತುಷ್ಪಥ
ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಿದ್ದು , ಸಂಪಾಜೆಯಿಂದ ಮಡಿಕೇರಿಯವರೆಗಿನ ರಸ್ತೆಯನ್ನು ಅಗಲೀಕರಣ ಮಾಡಲು ಸಚಿವರು ಆದೇಶಿಸಿದರು.
ಸಚಿವರ ಆದೇಶದ ಮೇರೆಗೆ ಮೊದಲು ಪ್ರಾಧಿಕಾರದ ಅಧಿಕಾರಿಗಳು ಯೋಜನೆಯ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಿದ್ದು ನಂತರ ವಿವರವಾದ ಯೋಜನಾ ವರದಿ ಸಿದ್ದಪಡಿಸಲಾಗುತ್ತದೆ.ಬಜೆಟ್ ನಲ್ಲಿ ಹಣ ನೀಡಿದ ನಂತರ ಕಾಮಗಾರಿ ಆರಂಬಗೊಳ್ಳಲಿದ್ದು ಈ ಕಾಮಗಾರಿ ಮುಂದಿನ ವರ್ಷ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.