ಸಮಗ್ರ ನ್ಯೂಸ್: ಶಾಲೆಯ ಜಾಗಕ್ಕೆ ಕನ್ನ ಹಾಕಿ ಅತಿಕ್ರಮಣ ಮಾಡುವುದನ್ನು ನಿಲ್ಲಿಸಲು ಗ್ರಾಮಸ್ಥರು ಪ್ರಧಾನಮಂತ್ರಿಗಳ ಮೊರೆ ಹೋದ ಘಟನೆ ಸಂಸದ ನಳಿನ್ ಕುಮಾರ್ ರವರ ಆದರ್ಶ ಗ್ರಾಮ ಬಳ್ಪದಲ್ಲಿ ನಡೆದಿದೆ. ಕಳೆದ 7 ವರ್ಷಗಳಿಂದ ಶಾಲೆಯ ಜಮೀನನ್ನು ಉಳಿಸುವ ನಿಟ್ಟಿನಲ್ಲಿ ಹಲವು ರೀತಿಯ ಹೋರಾಟ ನಡೆಸಿಕೊಂಡು ಬರುತ್ತಿರುವ ಗ್ರಾಮಸ್ಥರಿಗೆ ಈವರೆಗೂ ನ್ಯಾಯ ಸಿಗದೇ ಇರುವುದು ಇದೀಗ ಬೆಳಕಿಗೆ ಬಂದಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಅವರ ದತ್ತು ಗ್ರಾಮವಾದ ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇನ್ಯ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಸುಮಾರು 2 ಎಕರೆಗೂ ಅಧಿಕ ಭೂಮಿಯಿದೆ. ಆದರೆ, ಈ ಭೂಮಿಯಲ್ಲಿ ಸುಮಾರು 97 ಸೆಂಟ್ಸ್ ಜಾಗವನ್ನು ಶಾಲೆಯ ಪಕ್ಕದಲ್ಲೇ ಇರುವ ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿರುವುದಲ್ಲದೇ, ಕಂದಾಯ ಅಧಿಕಾರಿಗಳ ಜತೆ ಸೇರಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಇದೀಗ ಸರ್ಕಾರದ ಅಕ್ರಮ-ಸಕ್ರಮ ಕಾನೂನಿನಡಿ 60 ಸೆಂಟ್ಸ್ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
2015ರಲ್ಲಿ ನಡೆದ ಈ ಪ್ರಕ್ರಿಯೆಯನ್ನು ನಿರಂತರವಾಗಿ ಪ್ರತಿಭಟಿಸುತ್ತಾ ಬರುತ್ತಿರುವ ಕೇನ್ಯ ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿಯು ಈ ಜಾಗವನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮತ್ತೆ ಶಾಲೆಯ ಭೂಮಿಗಾಗಿ ಹೋರಾಟಕ್ಕೆ ಸಿದ್ಧರಾಗಿರುವ ಗ್ರಾಮಸ್ಥರು, ಶಾಲೆಯನ್ನು ಉಳಿಸಲು ಪ್ರಧಾನಿ ಮೊರೆ ಹೋಗಿದ್ದಾರೆ. ಶಾಲೆಯ ಭೂಮಿಯನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದು, ಈ ಭೂಮಿಗೆ ಬೇಕಾದ ದಾಖಲೆಗಳನ್ನು ಇಲಾಖೆಗಳೇ ನೀಡುತ್ತಿರುವುದು ವಿಪರ್ಯಾಸ ಎಂದು ಗ್ರಾಮಸ್ಥರು ಪ್ರಧಾನಿಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಪ್ರಧಾನಿ ಕಚೇರಿ, ಸಮಸ್ಯೆಯ ಬಗ್ಗೆ ಗಮನ ಹರಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಆದರೆ, ಪ್ರಧಾನಿ ಕಾರ್ಯಾಲಯದ ಸೂಚನೆಗೆ ಅಧಿಕಾರಿಗಳು ಬಗ್ಗದೆ ಅತಿಕ್ರಮಣ ಭೂಮಿಗೆ ದಾಖಲೆ ನೀಡುವ ಕೆಲಸದಲ್ಲಿ ಇದ್ದರೆ ಎಂಬುವುದು ಗ್ರಾಮಸ್ಥರ ಆರೋಪವಾಗಿದೆ.
ಸ್ವತಃ ಪ್ರಧಾನಿ ಕಾರ್ಯಾಲಯದಿಂದಲೇ ಅಕ್ರಮ ತಡೆಯುವಂತೆ ಸೂಚಿಸಿದ್ದರೂ, ಕ್ರಮಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿರುವ ಅಧಿಕಾರಿಗಳ ವಿರುದ್ಧ ಇನ್ನು ಯಾವ ರೀತಿಯ ಹೋರಾಟ ನಡೆಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಹೇಳುವ ಆಡಳಿತ ವರ್ಗ ಇನ್ನಾದರೂ ಈ ಕುರಿತು ಕ್ರಮವಹಿಸುವ ಅನಿವಾರ್ಯತೆ ಇದೆ.