ಸಮಗ್ರ ನ್ಯೂಸ್: ಐದು ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಗುರುವಾರ(ಮಾ.೧೦) ನಡೆಯಲಿದ್ದು, ಸಂಜೆ ವೇಳೆ ಪ್ರಸ್ತುತ ನಾಲ್ಕು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗಲಿದೆ.
ಮಾರ್ಚ್ 10 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮತಗಳ ಎಣಿಕೆಯಲ್ಲಿ ಮೊದಲು ಬ್ಯಾಲೆಟ್ ಪೇಪರ್ ಮತಗಳನ್ನು ಎಣಿಕೆ ಮಾಡಲಾಗುವುದು, ನಂತರ ಇವಿಎಂ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಉತ್ತರಾಖಂಡ ಮತ್ತು ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಚುನಾವಣೋತ್ತರ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು ಮತ್ತು ಸಮಾಜವಾದಿ ಪಕ್ಷಕ್ಕೆ ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಲಾಭ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಇದು ಕಾಂಗ್ರೆಸ್ ಮತ್ತು ಮಾಯಾವತಿಯ ಬಹುಜನ ಸಮಾಜ ಪಕ್ಷದ ಸ್ಥಾನಗಳಿಗೆ ಹೊಡೆತ ನೀಡಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಪಂಜಾಬ್ ಚುನಾವಣೆ ಬಗ್ಗೆ ಬಹುತೇಕ ಎಲ್ಲ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷಕ್ಕೆ ಪ್ರಚಂಡ ವಿಜಯವನ್ನು ಭವಿಷ್ಯ ನುಡಿದಿವೆ. ಮಾರ್ಚ್ 7 ರ ಮುನ್ಸೂಚನೆಗಳು ವಾಸ್ತವಕ್ಕೆ ಬಂದರೆ, ಪಂಜಾಬ್ ನಲ್ಲಿ ಹೊಸ ಮುಖ್ಯಮಂತ್ರಿಯಾಗಿ ಎಎಪಿಯ ಭಗವಂತ್ ಮಾನ್ ಗದ್ದುಗೆಗೇರಲಿದ್ದಾರೆ. ವಿಧಾನಸಭಾ ಫಲಿತಾಂಶದ ಮುನ್ನ ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ ಮತಯಂತ್ರಗಳು ಅಥವಾ ಇವಿಎಂಗಳ ಭದ್ರತೆಯ ವಿಷಯದಲ್ಲಿ ಕಟ್ಟುನಿಟ್ಟಾಗಿದೆ.
ಗೋವಾದಲ್ಲಿ ಈಗಾಗಲೇ ರೆಸಾರ್ಟ್ ರಾಜಕಾರಣ ಪ್ರಾರಂಭವಾಗಿದ್ದು, ಗೆಲ್ಲುವ ಕುದುರೆಗಳನ್ನು ಕಾಂಗ್ರೆಸ್ ಬಂಧಿಸಿದೆ.
ಒಟ್ಟಾರೆ ನಾಳೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಉ.ಪ್ರದೇಶದಲ್ಲಿ ಗೆಲ್ಲುವವರು ಮುಂದೆ ದೆಹಲಿ ಗದ್ದುಗೆ ಏರುತ್ತಾರೆ ಎಂಬ ಮಾತು ಕೇಳಿಬರುತ್ತದೆ.