ಸಮಗ್ರ ನ್ಯೂಸ್: ಉಕ್ರೇನ್‌ನ ಮಹಾ ನಗರಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ಹರಸಾಹಸ ಯುದ್ಧದ ಮುಂದುವರೆದಿದ್ದು ಈಗ ಪ್ರಮುಖ ಕರಾವಳಿ ನಗರಗಳಿಗೆ ರಷ್ಯಾ ಸೇನೆ ಲಗ್ಗೆ ಇಟ್ಟಿದೆ. ಈ ಮಧ್ಯೆ “ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾ ಎನ್‌ಪಿಪಿ ಮೇಲೆ ರಷ್ಯಾದ ಸೈನ್ಯವು ಎಲ್ಲಾ ಕಡೆಯಿಂದ ಗುಂಡು ಹಾರಿಸುತ್ತಿದೆ.
ಬೆಂಕಿ ಈಗಾಗಲೇ ಭುಗಿಲೆದ್ದಿದೆ. ಅದು ಸ್ಫೋಟಗೊಂಡರೆ, ಅದು ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ!” ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಮಿಟ್ರೋ “ರಷ್ಯನ್ನರು ತಕ್ಷಣವೇ ಬೆಂಕಿಯನ್ನು ನಿಲ್ಲಿಸಬೇಕು, ಅಗ್ನಿಶಾಮಕರಿಗೆ ಅವಕಾಶ ನೀಡಬೇಕು, ಭದ್ರತಾ ವಲಯವನ್ನು ಸ್ಥಾಪಿಸಬೇಕು!” ಎಂದು ಮನವಿ ಮಾಡಿದ್ದಾರೆ. ಇನ್ನು ಎನರ್ಹೋಡರ್ ನಗರದ ಮೇಲೆ ರಷ್ಯಾ ದಾಳಿಯಿಂದ ಯುರೋಪಿನ ಅತಿದೊಡ್ಡ ಪರಮಾಣು ಶಕ್ತಿ ಕೇಂದ್ರದಿಂದ ಹೊಗೆ ಗೋಚರಿಸುತ್ತಿದೆ ಎಂದು ಉಕ್ರೇನಿಯನ್ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
1986ರಲ್ಲಿ ಚರ್ನೋಬಿಲ್ ಪರಮಾಣು ಸ್ಥಾವರ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಸತ್ತಿದ್ದು ಕೆಲವೇ ನೂರಾರು ಜನರಾದರೂ, ಅದರ ಭೀಕರ ಪರಿಣಾಮಗಳಿಗೆ ತುತ್ತಾಗಿದ್ದು 5 ಲಕ್ಷಕ್ಕೂ ಹೆಚ್ಚು ಜನರು. ಈಗಲೂ ಅದರಿಂದ ಲಕ್ಷಾಂತರ ಜನರು ನರಳುತ್ತಿದ್ದಾರೆ. ಜಪೋರಿಝಿಯಾ ಎನ್‌ಪಿಪಿ ಸ್ಫೋಟಗೊಂಡರೆ ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ. ಹೀಗಾಗಿ ಮತ್ತೇನಾದರೂ ಅಂಥದ್ದೇ ದುರಂತ ಸಂಭವಿಸಿದರೆ ವಿಶ್ವ ಮತ್ತೊಂದು ಘೋರ ದುರಂತಕ್ಕೆ ಸಾಕ್ಷಿಯಾಗುವ ಭೀತಿ ಎದುರಾಗಿದೆ.