ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ, ಇಂದಿರಾನಗರ, ತೋಕೂರು ಪ್ರದೇಶದಲ್ಲಿ ಸಂಜೆಯಾದರೆ ಸಾಕು ವಾಮಾಚಾರಿಗಳು ಸಕ್ರಿಯವಾಗುತ್ತಿದ್ದು ಇವರ ಹಾವಳಿಯಿಂದ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಗಿದೆ.
ಈ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಲಾಗಿದ್ದು ರಾತ್ರಿ ವೇಳೆ ಗಸ್ತು ಬಿಗಿಗೊಳಿಸುವಂತೆ ಆಗ್ರಹ ವ್ಯಕ್ತವಾಗಿದೆ. ತೋಕೂರು ಬಸ್ ನಿಲ್ದಾಣ ಪರಿಸರ, ಕೆರೆಕಾಡು ಬೆಳ್ಳಾಯರು ಮುಖ್ಯರಸ್ತೆಯಲ್ಲಿ ರಾತ್ರಿ ವೇಳೆ ಕೋಳಿ ಬಲಿ ನೀಡುವುದು, ಲಿಂಬೆಹುಳಿ, ಕುಂಬಳಕಾಯಿ ಕಡಿಯುವುದು ಇತ್ಯಾದಿ ವಾಮಾಚಾರ ಪ್ರಯೋಗ ನಡೆಸುತ್ತಿದ್ದು ಸ್ಥಳೀಯರು ಬೆಳಗ್ಗೆ ನಡೆದಾಡಲು ಭಯಪಡುವ ಸ್ಥಿತಿ ಎದುರಾಗಿದೆ. ತೋಕೂರು ಬಸ್ ನಿಲ್ದಾಣ ಪರಿಸರದಲ್ಲಿ ರಾತ್ರಿ ವೇಳೆ ರಿಕ್ಷಾ, ಕಾರು ಸಂಶಯಾಸ್ಪದವಾಗಿ ಅಡ್ಡಾಡುವುದು ಕಂಡುಬರುತ್ತಿದ್ದು ಸ್ಥಳೀಯ ಕೆಲವು ವ್ಯಕ್ತಿಗಳ ಬಗ್ಗೆಯೂ ಸಾರ್ವಜನಿಕರು ನಿಗಾ ಇರಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಇಲ್ಲಿ ವಾಮಾಚಾರ, ಮಾಟ ಮಂತ್ರ ಪ್ರಯೋಗ ನಡೆಯುತ್ತಿದ್ದು ಬಸ್ ನಿಲ್ದಾಣ ಬಳಿ ಹೈಮಾಸ್ಟ್ ದೀಪ, ಸೋಲಾರ್ ಲೈಟ್ ಅಳವಡಿಕೆ ಬಳಿಕ ಕಮ್ಮಿಯಾಗಿತ್ತು. ಈಗ ವಾಮಾಚಾರಿಗಳು ಪ್ಲೈವುಡ್ ಕಾರ್ಖಾನೆ ರಸ್ತೆಯನ್ನು ಬಳಸುತ್ತಿದ್ದು ಪೊಲೀಸರು ರಾತ್ರಿ ವೇಳೆ ಗಸ್ತು ಹೆಚ್ಚಿಸುವ ಮೂಲಕ ಸಂಪೂರ್ಣ ತಡೆಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಹೊರಗಿನ ವ್ಯಕ್ತಿಗಳಲ್ಲದೆ ಸ್ಥಳೀಯರ ಪಾತ್ರವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.